ಬುಧವಾರ, ಡಿಸೆಂಬರ್ 6, 2017

ಮೂರೂವರೆ ವರ್ಷದ ಹಿಂದೆ ಶುರುವಾದ ಪಯಣವಿದು..



ಮೂರೂವರೆ ವರ್ಷದ ಹಿಂದೆ ಶುರುವಾದ ಪಯಣವಿದು.. ಇಂಜಿನಿಯರಿಂಗ್ ಎಂಬ ನೆಪದಲ್ಲಿ ಚಿಕ್ಕಮಗಳೂರಿನ ಹಾದಿ ಹಿಡಿದಿದ್ದೆ! ಇದೇ ಊರ ಆಯ್ಕೆ ಮಾಡಿಕೊಂಡ ಕಾರಣ  ವರ್ಷ ಪೂರ್ತಿ ಮಳೆ ಸುರಿಯತ್ತೆ ಎಂಬ ಖುಷಿಗೋ, ಸೆಖೆಗಾಲವೇ ಇರುವುದಿಲ್ಲ ಎಂಬ ಸಂತಸಕ್ಕೋ ತಿಳಿದಿಲ್ಲ.. ಬಂದ ಒಂದೆರಡು ತಿಂಗಳು ಸ್ವಲ್ಪ ಜಾಸ್ತಿಯೇ ಕಷ್ಟವಾದರೂ ವರ್ಷವೆರಡು ಕಳೆಯುವಷ್ಟರಲ್ಲಿ ಇಡೀ ಊರು ನನ್ನದಾಗಿಹೋಗಿದ್ದು, ಬಿಟ್ಟು ಬರಲು ಮನಸೇ ಬಾರದಷ್ಟು ನಾ ಈ ನೆಲವ ಹಚ್ಚಿಕೊಂಡಿದ್ದು ಈಗ ಇತಿಹಾಸ.. ಮೊದಲೇ ಊರೂರು ಸುತ್ತೋ ಹುಚ್ಚಿರೋ ನಂಗೆ ಚಿಕ್ಕಮಗಳೂರು ಆಪ್ತವಾಗಿದ್ದು ದೊಡ್ಡ ವಿಷಯವಲ್ಲದಿದ್ದರೂ ಅಂಥದೇ ಮನಃಸ್ಥಿತಿಯ ಗೆಳೆಯರು ಸಿಕ್ಕಿದ್ದು ವಿಶೇಷ. 'ನಮ್ಮ ಚಿಕ್ಕಮಗಳೂರು' ಎಂಬ ನೆಪದಲ್ಲಿ ಪೂರ್ತಿ ಊರನ್ನು ಸುತ್ತಲು ಪ್ರಾರಂಭಿಸಿ ವರ್ಷ ಎರಡಾಯಿತು.. 
ಹೇಳಿ-ಕೇಳಿ ನಮ್ಮೂರು ಹುಲಿ-ಚಿರತೆಗಳಿಗೆ ಪ್ರಸಿದ್ಧವಾದದ್ದು. ಎಸ್ಟೇಟ್ ನ ದಾರಿಯಲ್ಲೆಲ್ಲಾದರೂ ಹುಲಿ ಎದುರಾದರೂ, ಶಾಲೆಯೊಳಗೆ ಚಿರತೆ ಬಂದು ಕೂತು ಪಾಠ ಕೇಳಿದರೂ ಅಚ್ಚರಿಯೇನಿಲ್ಲ :ಫ್ ಹಿಂಗೇ ಯಾವಾಗಲೋ ಊರೊಳಗೆ ಬಂದ ಚಿರತೆಯನ್ನ ನೋಡಿಕೊಂಡು ಬರುವ ಎಂದು ಹೊರಟಾಗ  ಮಾರ್ಗ ಮಧ್ಯದಲ್ಲಿ ಹುಟ್ಟಿಕೊಂಡ ಕನಸು 'ಮುತ್ತೋಡಿ'. 'ಮುತ್ತೋಡಿಯ ಕಾಡು ಅದೆಷ್ಟು ಚಂದವಿದೆ ಗೊತ್ತಾ' ಎಂಬ ಒಂದು ಮಾತು ಸಾಕಿತ್ತು ನಮಗೆ!! ಹಿಂದೆ ಮುಂದೆ ನೋಡದೆ ಮುಂದಿನ ವಾರ ಮುತ್ತೋಡಿಗೆ ಹೋಗುವ ಎಂಬ ಪ್ಲಾನ್ ಸಿದ್ಧವಾಗಿತ್ತು. ಅದ್ಯಾಕೋ ಕಾಲೇಜಿನ ಗಡಿಬಿಡಿಯ ಕೆಲಸಗಳ ನಡುವೆ ಆ ಮುಂದಿನ ವಾರ ತಿಂಗಳುಗಳು ಕಳೆದರೂ ಬಂದಿರಲೇ ಇಲ್ಲ.. ಪರೀಕ್ಷೆಗಳೆಲ್ಲ ಮುಗಿದ ಸಂಭ್ರಮಾಚರಣೆಗೆ ಮತ್ತೆ ಮುತ್ತೋಡಿ ನೆನಪಾಗಿತ್ತು. 
ತೀರ್ಥಹಳ್ಳಿ, ಶೃಂಗೇರಿ, ಶಿವಮೊಗ್ಗ ಹೀಗೆ ತುಂಗೆಯ ಮಡಿಲಲ್ಲೇ ಬೆಳೆದ ನಂಗೆ ಭದ್ರೆಯೆಂದರೆ ಅದೇನೋ ಸೆಳೆತ. ಸಮಾಸಮ ಬಳುಕಿ ತಣ್ಣಗೆ ಹರಿಯೋ ತುಂಗೆ ಪ್ರೀತಿಯ ಸೆಲೆಯಂತೆ ಕಂಡರೆ ರಭಸದಿ ಭೋರ್ಗರೆಯೋ ಭದ್ರಾ ಆಕರ್ಷಣೆಯ ತುತ್ತತುದಿ. ಭದ್ರೆಯ ತಟದ ಕಾಡು ಎಂಬ ಅಂಶ ಮತ್ತೂ ಸೆಳೆದಿತ್ತು ಆ ದಟ್ಟಡವಿಯೆಡೆಗೆ. ಪರೀಕ್ಷೆ ಮುಗಿದ ಮರುದಿನವೇ ಊರಿನ ಕಡೆ ಮುಖ ಮಾಡುವುದ ಬಿಟ್ಟು ಅರಣ್ಯ ಪರ್ವ ಶುರುವಾಗಿತ್ತು. 'ಬೆಳಗ್ಗೆಯೊಂದು ಸಂಜೆಯೊಂದರ ಹಾಗೆ ಎರಡು ಟ್ರಿಪ್ ಇರುತ್ತೆ, ಎಷ್ಟೊತ್ತಿಗ್ ಹೋಗ್ತೀರಾ ?' ಎಂದು ಕೇಳಿದ್ದ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರಿಗೆ ಬೆಳಗ್ಗೆಯೇ ಆಗ್ಬೋದು ಎಂಬ ಉತ್ತರ ನೀಡಿಯಾಗಿತ್ತು. ಹೀಗೆ ವರ್ಷದ ಕಡೆಯ ದಿನಕ್ಕೆ ಕಾಡೊಂದರ ನಡುವೆ ವಿದಾಯ ನೀಡೋ ಸಡಗರ ನಮ್ಮೊಡಗೂಡಿತ್ತು :) 
     ಬೆಳ್ಳಂಬೆಳಿಗ್ಗೆ 3-45 ನಿಂದಲೇ ದಡಬಡಿಸಿ ಎದ್ದು, ಜೊತೆಯಲ್ಲಿ ಉಳಿದವರಿಗೂ ಒಂದಷ್ಟು ಇರ್ರಿಟೇಟ್ ಮಾಡಿ ಎಬ್ಬಿಸಿ , ಮತ್ತಷ್ಟು ಬೈಸಿಕೊಂಡು ಚಿಕ್ಕಮಗಳೂರು ಬಿಡುವ ಹೊತ್ತಿಗೆ ಗಂಟೆ ಐದಾಗಿತ್ತು! ಮಲ್ಲಂದೂರು ರಸ್ತೆಯಲ್ಲಿ ಸುಮಾರು 40-45 ಕಿ.ಮೀ ಹಾವು ಕವಲಿನ ಹಾದಿ ಸಾಗಿದರೆ ಮುತ್ತೋಡಿಯ ಕಾಡು ಸ್ವಾಗತಿಸುತ್ತದೆ. ಗವ್ವೆನ್ನುವ ಕತ್ತಲು, ಒಂದೆಡೆ ಕಾಫಿ-ಟೀ  ಎಸ್ಟೇಟ್; ಮತ್ತೊಂದು ಬದಿ ಸಾವಿರಾರು ಅಡಿಯ ಪ್ರಪಾತ. ಆಗೊಮ್ಮೆ ಈಗೊಮ್ಮೆ ಘಮ್ಮೆನ್ನುವ ಕಾಫಿಯ ತಿರುಳ ಸುಗಂಧ( ನಮ್ಮೂರ ಕಾಫಿ ರುಚಿ ಬಲ್ಲವರಿಗಷ್ಟೇ ಇದು ಸುಗಂಧವಾಗಿರುತ್ತದೆ :ಫ್ ) , ಚಂದ್ರ ಇಲ್ಲದೇ ಸೂರ್ಯ ಮೂಡದೇ ಬರೀ ಚುಕ್ಕಿಗಳಿಂದಲೇ ಕೂಡಿದ್ದ ನೀಲಾಕಾಶ, ಕಾಡಿನ ಬಗೆಗಿಷ್ಟು ನನ್ನದೇ ರಮ್ಯ ಊಹಾಲೋಕ ಜೊತೆಗಿಷ್ಟು ಗೆಳೆಯರ ಮಾತುಕಥೆ! ಮುಂಜಾನೆಯೊಂದು ಇದಕ್ಕಿಂತ ಚಂದವಿರಲಾರದು ಅನ್ನೋ ಭಾವ ನನ್ನೊಳಗೆ.. 
    ದಿನಮಣಿ ಕಣ್ತೆರವ ಹೊತ್ತಿಗೆ ನಾವೈವರು ಭದ್ರಾ ಅಭಯಾರಣ್ಯದ ಮಡಿಲಲ್ಲಿ ಹಕ್ಕಿಗಳ ಕಲರವ ಆಲಿಸುತ್ತಿದ್ದೆವು. ಸುಮಾರು ಹತ್ತು ವರ್ಷಗಳ ಹಿಂದೆ ನಿಟ್ಟೂರಿನ ನೇಚರ್ ಕ್ಯಾಂಪ್ ನಲ್ಲಿ ತಟಸ್ಥವಾಗಿ ಕುಳಿತು ಪಕ್ಷಿಗಳ ಚಿಲಿಪಿಲಿ ಕೇಳಲು ಕಲಿತಿದ್ದ ಅಭ್ಯಾಸ ಇಂದ್ಯಾಕೋ ನಿರಾಯಾಸವಾಗಿ ನನ್ನೊಳಗೆ ಅರಳಿ ನಿಂತಿತ್ತು. ನೀಲಿ ಪುಕ್ಕ, ಕಪ್ಪು ಬಾಲ, ಕೆಂಪು ಕಣ್ಣು, ಚೀಂವ್ ಚೀಂವ್ ಸದ್ದು ಪ್ರತಿ ಪ್ರಕೃತಿ ಪ್ರೇಮಿಯ ಹೃದಯದಲ್ಲಿ ಅವರ್ಣನೀಯ ಆನಂದವ ಮೂಡಿಸುವುದಂತೂ ಸುಳ್ಳಲ್ಲ. ಪೂರ್ತಿ ಬೆಳಕಾಗಿ ಸೂರ್ಯ ರಶ್ಮಿ ಮೈ ತಾಕುವ ಮುಂಚೆಯೇ ತೆರೆದ ಜೀಪಿನಲ್ಲಿ ಸಫಾರಿ ಹೊರಡಲು ತುದಿಗಾಲಲ್ಲಿ ನಿಂತಿದ್ದೆವು ನಾವು!:) 6-45 ರಿಂದ ಮತ್ತೆರಡು ಘಂಟೆ ಈ ಯಾಂತ್ರಿಕ ಯುಗದಿಂದ ದೂರಾಗಿ ಕಾಡೊಳಗೆ ನಾವು ಕಳೆದುಹೋಗಿದ್ದೆವೋ; ನಮ್ಮಳಗೆ ಕಾಡು ಇಳಿದು ಹೋಗಿತ್ತೋ ನಾ ಕಾಣೆ!!  ಕೈ-ಕಾಲೆಲ್ಲಾ ಮರಗಟ್ಟಿ ಹೋಗುವಂಥ ತಣ್ಣನೆ ಕುಳಿರ್ಗಾಳಿ, ದಟ್ಟಾರಣ್ಯದ ನಡುವೆ ಅಪರೂಪಕ್ಕೊಮ್ಮೆ ಚುಂಬಿಸಿ ಹೋಗೋ ದಿನಕರನ ಕಿರಣಗಳು, ಜುಳು ಜುಳನೆ ಸದ್ದು ಮಾಡಿಕೊಂಡು ಹರಿಯೋ ನನ್ನಿಷ್ಟದ ಭದ್ರೆ.. "ಅನುಭವಿಸಿದವರಿಗೇ ಗೊತ್ತು ಅನುಭವದ ಮರ್ಮ!!" ದುರಾದೃಷ್ಟವಶಾತ್ ಪ್ರಾಣಿಗಳಾವುವೂ ಕಣ್ಣಿಗೆ ಬೀಳದಿದ್ದರೂ ಬೇಸರವಾಗದ ರೀತಿಯಲ್ಲಿ ಕಾಡಿನ ಮೋಡಿ ನಮ್ಮನ್ನು ಆವರಿಸಿತ್ತು. 'ಕ್ಯಾಮರಾ ತಂದಿದ್ದೂ ವ್ಯರ್ಥ.. ಒಂದಾದ್ರೂ ಹುಲಿ ಕಾಣ್ಬಾರ್ದಿತ್ತ ಮಾರಾಯ್ತಿ' ಎಂದು ಗೆಳೆಯ ಬೇಸರಿಸುತ್ತಿದ್ದರೆ, ಹುಲಿ ಕಂಡಿದ್ದರೆ ಕಾಡಿನ ಮನಮೋಹಕತೆಯೆಲ್ಲಾ ಹುಲಿಯ ನೆಪದಲ್ಲಿ ಕಳೆದುಹೋಗಿಬಿಡುತ್ತಿತ್ತೇನೋ ಎಂಬ ಭಯ ನನ್ನಾವರಿಸಿ 'ಕಾಣದಿದ್ದಿದ್ದೇ ಒಳ್ಳೆಯದಾಯ್ತು ಬಿಡು..' ಎಂದಿದ್ದ ನನ್ನ ಕೊಂದೇ ಬಿಡುವಷ್ಟು ಕೋಪದಲ್ಲಿ ನೋಡಿ ಮತ್ಯಾವುದೋ ಮರದ ಫೋಟೋ ಕ್ಲಿಕ್ಕಿಸಲು ದಾಪುಗಾಲಿಟ್ಟು ನಡೆದುಬಿಟ್ಟಿದ್ದ ಅವ. ಮರಳಿ ಬರುವ ಹಾದಿಯಲ್ಲಿ ಸೊಂಟ ಬಳುಕಿಸಿ, ಗಾಂಭೀರ್ಯದಿಂದ ನಡೆದು ಬರುತ್ತಿದ್ದ ನೂರು ಗರಿಯ ನವಿಲೊಂದೇ ನಮಗೆ ಕಂಡ ವನ್ಯಜೀವಿ. ಜೀಪಿಳಿಯುವ ಸಮಯಕ್ಕೆ ಡ್ರೈವರ್ ನ ಅದೆ ಹಳೆಯ ಡೈಲಾಗ್ ' ನನ್ನ ಸರ್ವಿಸ್ ನಲ್ಲೇ ಇದೇ ಮೊದಲು ಸಾರ್ ಒಂದೂ ಪ್ರಾಣಿ ಕಾಣಿಸದೇ ಇರೋದು.. ಛೇ ಹೀಗಾಗ್ಬಾರ್ದಾಗಿತ್ತು'!! ಕಿಸಕ್ಕೆಂದು ನಕ್ಕ ಗೆಳತಿಯ ಬಾಯಿ ಮುಚ್ಚಿಸಿ ಎಲ್ಲದಕ್ಕೂ ಅದೃಷ್ಟ ಬೇಕು ಬಿಡಿ ಎಂದು ಅವನ ಮುಂದುವರಿಯುವ 'ವಾರದ ಹಿಂದೆ ಹುಲಿ ಕಂಡಿತ್ತು ಗೊತ್ತಾ'  ಕಥೆಗೆ ಬ್ರೇಕ್ ಹಾಕುವಲ್ಲಿ ನಾವು ಯಶಸ್ವಿಯಾಗಿದ್ದೆವು. ಏನೇ ಆದರೂ ಕಾಡಿನೊಳಗೆ ಐದು ಜನ ಹಿಡಿದು ನಿಲ್ಲುವಷ್ಟು ದೊಡ್ಡದಾದ, ಮುನ್ನೂರು ವರ್ಷಗಳ ಇತಿಹಾಸವಿರೋ ತೇಗದ ಮರದ ಚಿತ್ರ ಈ ಕ್ಷಣಕ್ಕೂ ಕಣ್ಣಲ್ಲೇ ನಿಂತಿದೆ.  
           ಎಲ್ಲ ಅನುಭವಗಳನ್ನೂ ಮತ್ತೆ ಅಮ್ಮನೊಂದಿಗೆ ಹಂಚಿಕೊಳ್ಳುವಾಗ ಚಿಕ್ಕಮಗಳೂರ್ಯಾಕೋ ಇನ್ನೂ ಆಪ್ತವಾದಂತೆ ಭಾಸವಾಗಿತ್ತು. ಮುತ್ತೋಡಿಯ ಕಾಡಿಗೆ ಸಂಜೆಯೂ ಒಮ್ಮೆ ಹೋಗಿ ನೋಡ್ಬೇಕು ಅನ್ನೋ ಆಸೆ ಮನದೊಳಗೆ ಮೂಡಿಯಾಗಿದೆ. ಸೂರ್ಯಾಸ್ತದ ಕೆಂಪು ಕೆಂಪು ರಂಗಲ್ಲಿ ಕಾಡು ಇದರ ನಾಲ್ಕು ಪಟ್ಟು ಸೆಳೆಯಬಹುದೇನೋ ಎಂಬ ಕುತೂಹಲ ನನ್ನಲ್ಲಿ. ಈ ಊರಿನ ಮೋಹಕತೆಗಳೆಲ್ಲಾ ಅಂತೆಯೇ ಉಳಿದುಬಿಡಲಿ.
    " ಅಲ್ಲೆ ಇವೆ ಕಾಜಾಣ ಕೋಗಿಲೆ
           ಏನೆ ಗಿಳಿ ಕಮಕಳ್ಳಿಯೂ.. 
       ಕಂಪೆರೆವ ಸೀತಾಳೆ ಕೇದಗೆ 
          ಬಕುಳ ಮಲ್ಲಿಗೆ ಬಳ್ಳಿಯೂ.. 
       ನೀಲಿ ಬಾನಲಿ ಹಸಿರು ನೆಲದಲಿ 
           ಕಂಗಳೆರಡವೆ ಬಲ್ಲವು.. 
       ಅಲ್ಲಿ ಸಗ್ಗವೆ ಸೂರೆಗೊಂಡಿದೆ
            ನಂದನವೆ ನಾಡೆಲ್ಲವೂ.. "
ಮುತ್ತೋಡಿಯ ಕಾಡೆಂದರೆ ಮತ್ತೆ ಮತ್ತೆ ನೆನಪಾಗೋ ಕುವೆಂಪುರ ಸಾಲುಗಳ ಜೊತೆಗೆ ಕಾಡಿನ ಕಂಪೂ ಚಿರವಾಗಲಿ ಎದೆಯೊಳಗೆ..

ಮಳೆ ಹಾಡಾಗಲಿ.. ಬದುಕಾಗಲಿ..

ಹೊಳೆ ತುಂಬಾ ನೀರು, ಮನೆ ತುಂಬಾ ಖುಷಿ, ಮನಸ್ಸು ತುಂಬಾ ಪ್ರೀತಿ :) ಮಳೆಗಾಲ ಅಂದ್ರೆ ಯಾವತ್ತಿಗೂ ಸಂಭ್ರಮವೇ..  ಆಲಿಕಲ್ಲು, ಮುಳುಗೋ ರಾಮ ಮಂಟಪ, ಕೊಚ್ಚೆ ಕಾಲು ಹಾಗೂ ಮುರಿದುಹೋಗಿರೋ ಕೊಡೆ(ಛತ್ರಿ).. ಮಳೆಯ ಮೇಲೆ ಒಲವಾಗದೇ ಹೋಗುವುದಕ್ಕೆ ಕಾರಣವೇ ಸಿಗುವುದಿಲ್ಲವಾದೀತು.. ಪ್ರತಿ ಊರಿನ ಮಳೆಗೂ ಅದರದ್ದೇ ಆದ ಅಂದ-ಚಂದವಿದೆ, ಘನತೆ-ಗಾಂಭೀರ್ಯವಿದೆ. ತೀರ್ಥಹಳ್ಳಿಯಲ್ಲೊಂದು ಆಪ್ತಭಾವವ ಕಟ್ಟಿಕೊಡೋ ಮಳೆಹನಿಗಳು, ಚಿಕ್ಕಮಗಳೂರಲ್ಲಿ ಹೂಕಂಪನ ಮೂಡಿಸುತ್ತವೆ.. ಬೆಂಗಳೂರಿನ ಮಳೆಯಲ್ಲಿ ಒಂಟಿತನದ್ದೊಂದು ಛಾಪಿದೆ.. ಶಿವಮೊಗ್ಗದಲ್ಲಿ ನಿರ್ಲಿಪ್ತವೆಂತನಿಸೋ ಮಳೆಗಾಲ, ಸಾಗರ-ಶಿರಸಿಯಲ್ಲೆಲ್ಲಾ ಆರ್ಭಟವೆನಿಸಿಬಿಡುತ್ತದೆ. ಕಡಲೂರಿನಲ್ಲಿ ಮಳೆಯ ಲಯವೇ ಬೇರೆ! ಬಯಲುಸೀಮೆಯಲ್ಲಿ ಮಳೆಯೆಂದರೆ ಜೀವಜಲ.
ಮಳೆಗೊಂದು ತಾಳವಿದೆ.. ಧೇನಿಸಿದರೆ ನಮ್ಮದೆನಿಸೋ ರಾಗವಿದೆ.. ಶೃತಿಬದ್ಧವಾಗಿ ಸುರಿಯೋ ಮಳೆಯಲ್ಲೊಂದು ಮೌನವಿದೆ. ಮೌನದಾಚೆಗಿನ ಉಳಿದುಹೋದ ಮಾತುಗಳಿವೆ.. 
ಸುಮ್ಮನೇ ಕುಳಿತರೆ ಸಾಂತ್ವನಿಸೋ ಮಳೆ, ಖುಷಿಸ ಹೊರಟರೆ ಕುಣಿಯಲಾರಂಭಿಸುತ್ತದೆ :) ಮಳೆಯ ಹುಡುಕಿಕೊಂಡು ಊರೂರು ಅಲೆದಿದ್ದಿದೆ.. ಮಳೆಗೋಸ್ಕರವೇ ನಾಲ್ಕು ವರ್ಷದ ಓದನ್ನ ಆ ಊರಲ್ಲಿ ಓದಿದ್ದಿದೆ.. ಜೋರಾಗಿ ಮಳೆ ಬರ್ಲಿ ಅಂತೆಲ್ಲಾ ಕಣ್ಣಲ್ಲಿ ನೀರು ತುಂಬಿಕೊಂಡು ದೇವರಲ್ಲಿ ಬೇಡಿಕೊಂಡಿದ್ದಿದೆ.. ಮಳೆಯಾಗುವಾಗ ಸಮುದ್ರ ಹೇಗಿರತ್ತೆ? ಕಾಡಲ್ಲಿ ಮಳೆಯಾದ್ರೆ ಎಷ್ಟು ಜೋರಾಗಿ ಕೇಳತ್ತೆ? ಬೆಟ್ಟದ ಮೇಲೆ ನಿಂತಾಗ ಮಳೆಹನಿ ರಭಸ ಹೆಚ್ಚಿರತ್ತಾ? ಅನ್ನೋ ಎಕ್ಸ್ ಪೆರಿಮೆಂಟ್ ನೆಲ್ಲಾ ಅದೆಷ್ಟೋ ಬಾರಿ ಮಾಡಿದ್ದಿದೆ.. ಇವೆಲ್ಲದರ ಆಚೆಗೂ ಮಳೆಯ ಬಗೆಗಿನ ಕುತೂಹಲ ಹಾಗ್ ಹಾಗೆಯೇ ಉಳಿದುಹೋಗಿಬಿಡುತ್ತದೆ. 
ಮಳೆಯಲ್ಲಿ ಮಡಿಯುಟ್ಟು ಕೊಡೆಹಿಡಿದು, ಚಪ್ಪಲಿಯೂ ಹಾಕದೆ, ಕೆಸರು ರಸ್ತೆಯಲ್ಲೇ ದೇವಸ್ಥಾನಕ್ಕೆ ನಡೆದುಹೋಗೋ ಚಿಕ್ಕಪ್ಪ.. ’ಗಾಜನೂರು ಡ್ಯಾಮ್ ಅಲ್ಲಿ ನೀರು ಬಿಟ್ಬಿಟ್ರು ಕಣೇ ಅಕ್ಕಾ.. ಇಲ್ದಿದ್ರೆ ಇವತ್ತಿಗ್ ರಾಮ ಮಂಟಪ ಮುಳುಗಿ ರಜೆ ಸಿಕ್ತಿತ್ತು ನಮ್ಗೆ’ ಅಂತ ಹ್ಯಾಪು ಮೋರೆ ಹಾಕಿ ಕೂತಿರೋ ಪುಟ್ಟ ತಮ್ಮ.. ಮಳೆಗಾಲದಲ್ಲಿ ಶೀತವಾಗದಿರಲಿ ಅಂತ ದೊಡ್ಡಮ್ಮ ಕೊಟ್ಟಿರೋ ಪೆಪ್ಪರುಮೆಂಟಿನ ತರದ ಶುಂಠಿ ಮಾತ್ರೆ.. ಮಳೆಯಂದ್ರೆ ಮನಮುತ್ತೋ ಆಪ್ತ ಭಾವಗಳ ಸಂತೆ :)
ನೀ ಈ ಊರಿಗೆ ಮತ್ತೆ ಬಂದ್ರೆ ಮಳೇಲೊಂದು ಲಾಂಗ್ ಡ್ರೈವ್ ಕರ್ಕೊಂಡು ಹೋಗಿ ಕಡೆಗೊಂದು ಬೆಚ್ಚಗಿನ ಕಾಫೀ ಕೊಡಿಸ್ತೀನಿ ಅನ್ನೊ ಬದುಕ ಗೆಳೆಯ.. ಪೇಪರ್ ದೋಣಿಯ ಜೊತೆಗೆ ಕವನದ ಸಾಲಿರಿಸಿ   ಪೋಸ್ಟ್ ಮಾಡಿರೋ ಗೆಳತಿ.. ಮಳೆಯಾದಾಗೆಲ್ಲಾ ತಿನ್ಬೇಕು ಅನ್ನಿಸೋ ಭಟ್ರಂಗಡಿ ಪಾನಿಪೂರಿ.. ಮಳೆಯಂದ್ರೆ ಮನಕಲುಕೋ ನಿಶ್ಶ್ಯಬ್ಧ ಭಾವಗಳ ಚಡಪಡಿಕೆ :)
ಇವತ್ತಿನ್ನೂ ಆರಿದ್ರೆಯ ಮಳೆ ಮುಗಿದಿದೆ..  ನಾಳೆಯಿಂದ ಧೋ ಸುರಿಯೋ ಪುನರ್ವಸು ನಕ್ಷತ್ರದ ಮಳೆ :) 
ಮನದ ಭಾವಗಳನ್ನೆಲ್ಲಾ ಪ್ರತಿಫಲಿಸೋ ಮಳೆ ಇನ್ನಷ್ಟು ಸುರಿಯಲಿ.. ಮತ್ತಷ್ಟು ಭೋರ್ಗರೆಯಲಿ. ಮಳೆ ಹಾಡಾಗಲಿ.. ಬದುಕಾಗಲಿ. 

ಅನಾಹತ..

ಅದೊಂದು ಬದುಕ ತುಂಬಾ ಪ್ರೀತಿಯನ್ನೇ ಹುಡುಕುತ್ತಾ ಹೋದವರ ಕಥೆ! ಪ್ರೀತಿಯೆಂಬ ಯುದ್ಧದಲ್ಲಿ ಗೆಲ್ಲುತ್ತಲೇ ಸೋತವರ ಕಥೆ.. ಜಗತ್ತು ತೊಡಿಸಿದ ಮಹಾಪತೀವ್ರತೆಯರೆಂಬ ಹಣೆಪಟ್ಟಿಯ ಭಾರ ಹೊರಲಾರದೇ ನಲುಗಿದವರ ಕಥೆ..
ಅಲ್ಲಿದ್ದವರೈವರು.. ಸ್ವರ್ಗದ ವಸಂತೋತ್ಸವದ ಸಂಭ್ರಮಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾ ಗತಕ್ಕೆ ಜಾರುತ್ತಾರೆ ಈ ನಾರೆಯರು..
ರಾಮಾಯಣದುದ್ದಕ್ಕೂ ಕಾಡುವ ಊರ್ಮಿಳೆ ತನ್ನ ವೇದನೆಗಳ ನಿವೇದಿಸುವ ಪರಿ ಆತ್ಮೀಯವೆನಿಸಿದರೂ ನಮ್ಮದಾಗುವುದಿಲ್ಲ! ಪಾತ್ರಧಾರಿಗಳೆನಿಸುತ್ತಾರೆಯೇ ಹೊರತು ರಂಗದ ಮೇಲಿದ್ದವರು ಊರ್ಮಿಳೆಯೆನಿಸುವುದಿಲ್ಲ.. ಆದರೂ ಊರ್ಮಿಳೆ ಮನ ಮುಟ್ಟುತ್ತಾಳೆ! ಮಾತುಗಳ ಮೂಲಕ, ಭಾವಗಳ ಮೂಲಕ ಅವಳ ಮೂಕ ಸಂವೇದನೆಗಳು ನೋಡುಗರನ್ನು ತಲುಪುತ್ತವೆ.. ಲಕ್ಷ್ಮಣ, ರಾಮನ ತಮ್ಮನಾಗಿ ಮಾತ್ರವಲ್ಲದೆ, ಊರ್ಮಿಳೆಯ ಗಂಡನೂ ಆಗಿದ್ದ ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಹದಿನಾಲ್ಕು ವರ್ಷ ಪ್ರೀತಿಸುವ ಪತಿಯನ್ನು ಅಗಲಿ ಅರಮನೆಯಲ್ಲಿ ವನವಾಸ ಅನುಭವಿಸುವ ಹದಿನಾರರ ತುಂಬು ಹರೆಯದ ಹುಡುಗಿ ಊರ್ಮಿಳೆ. ದೇಹದ ಬಯಕೆಗಳ ಮೆಟ್ಟಿ ಪ್ರೀತಿಗೆ ಹಾತೊರೆಯುತ್ತಾ ಹಪಾಹಪಿಸುವ ಅವಳಿಗೆ ವನವಾಸದ ನಂತರವೂ ಗಂಡನಾಗಿ ಲಕ್ಷ್ಮಣ ದೊರೆಯುವುದೇ ಇಲ್ಲ! ಚರಿತ್ರೆಯ ಪುಟಗಳಲ್ಲಿ ದಾಖಲಾಗುವ ರಾಮಾಯಣದ ಪಾತ್ರಗಳಲ್ಲಿ ಊರ್ಮಿಳೆ ಕಾಣುವುದೇ ಇಲ್ಲ... 'ನೀನು ಲಕ್ಷ್ಮಣನ ಜೊತೆಗೆ ಕಾಡಿಗೆ ಹೋಗಿದ್ದರೆ, ಅಲ್ಲಿ ಮಾಯಾಜಿಂಕೆಯ ಬೇಟೆಯ ಸಮಯದಲ್ಲಿ ಸೀತೆಯ ಜೊತೆಯಿದ್ದಿದ್ದರೆ.. ರಾವಣನ ಬಲೆಯಲ್ಲಿ ಸೀತೆ ಬೀಳದೇ ಹೋಗುತ್ತಿದ್ದಳಾ?' ಎಂಬ ಮಂಡೋದರಿಯ ಪ್ರಶ್ನೆ ರಾಮಾಯಣವನ್ನು ನೋಡಬಹುದಾದ ಮತ್ತೊಂದು ಆಯಾಮವನ್ನು ತೋರಿಸುತ್ತದೆ..
ಪ್ರಶ್ನೆಗಳಲ್ಲಿಯೇ ಮುಳುಗೇಳುವ ಊರ್ಮಿಳೆಯ ನಂತರ ಉತ್ತರವಾಗಿ ಆವರಿಸಿಕೊಳ್ಳುವವಳು ಅಹಲ್ಯೆ! ತಾಯಿಯಿಲ್ಲದೆ ಆಶ್ರಮದಲ್ಲಿ ಬೆಳೆದ ಮಗು ಆಕೆ. ಆಶ್ರಮದ ಕಟ್ಟುಪಾಡಿಗೆ ಹೊಂದಲಾಗದೇ ಬಿಡುಗಡೆಗೆಂದು ಕಾಯುತ್ತಿರುವ ದಿನದಂದೇ ಜೀವನಪರ್ಯಂತದ ಬಂಧನಕ್ಕೆ ಒಳಗಾದವಳು. ಮೋಹಿಸದೇ ವರಿಸಿದ ಪತಿಯನ್ನು ಒಪ್ಪಲಾಗದೇ ಪ್ರತಿ ರಾತ್ರಿ ತನ್ನನ್ನು ತಾನೇ ದಹಿಸಿಕೊಂಡವಳು. ಗೌತಮರ ಸನ್ಯಾಸತ್ವದ ಜೀವನವನ್ನು ಸಹಿಸಲಾರದೇ ಎದೆ ತುಂಬಾ ಪ್ರೀತಿ ನೀಡುವ ಜೀವಕ್ಕಾಗಿ ಕಾದ ನೆಲದಂತೆ ಕಾದವಳು! ಆಗ ಬಂದಿದ್ದ ಇಂದ್ರ.. ಅವನ ಪ್ರೀತಿಗೆ, ಎದೆಯ ಹರವಿಗೆ, ತೋಳ ಬಿಸುಪಿಗೆ ಇಡಿ ಇಡಿಯಾಗಿ ತನ್ನನ್ನು ಅರ್ಪಿಸಿಕೊಂಡ ಅಹಲ್ಯೆಗೆ ಕಡೆಗೂ ಸಿಕ್ಕಿದ್ದು ಏಕಾಂತವೆಂಬ ಬಂಧನವಿಲ್ಲದ ಬಯಲು. ಇಂದ್ರನನ್ನು ಮೋಹಿಸಿದ್ದು ಹೌದು, ಅವನೊಡನೆ ಭೋಗಿಸಿದ್ದು ಹೌದು, ಇಂದ್ರನೆಂದು ತಿಳಿದೇ ಅವನೊಡನೆ ಪ್ರೀತಿಗೆ ಬಿದ್ದಿದ್ದು ಎಂಬುದನ್ನು ಇನಿತೂ ಅಂಜಿಕೆಯಿಲ್ಲದೆ ಹೇಳಿ ಉಳಿದದ್ದೆಲ್ಲವನ್ನೂ  ಕಟ್ಟುಕಥೆ ಎಂದು ಸಾರಾಸಗಟಾಗಿ ತಿರಸ್ಕರಿಸಿ ಬಿಡುವ ಅಹಲ್ಯೆಯನ್ನು ಬಾಚಿ ತಬ್ಬಿಕೊಂಡುಬಿಡುವ ಮನಸ್ಸಾಗುತ್ತದೆ. ಗಂಡನ ನಿರಾಕರಣೆಗೆ ಒಳಗಾದ ಹೆಣ್ಣು ಪ್ರೀತಿಗಾಗಿ ಹಂಬಲಿಸಿದರೆ, ಕೈ ಚಾಚಿದರೆ ತಪ್ಪು ಎನ್ನುವ ಸ್ವಯಂಘೋಷಿತ ಬುದ್ಧಿಜೀವಿಗಳೆದುರಿಗೆ 'ಅನಾಹತ' ಬೇರೆಯದೆ ರೀತಿಯಾಗಿ ಎದ್ದುನಿಲ್ಲುತ್ತದೆ..
ಕಡೆಗೆ ಬರುವವಳು ರಾಧೆ! ಅದೇ ನಡುಮಧ್ಯಾಹ್ನದ ಕನಸಲ್ಲಿ ಬಂದು ಕೃಷ್ಣನ ಬಗ್ಗೆ ಕುತೂಹಲವ ಕೆರಳಿಸುವ ರಾಧೆ.. ಮುರುಳಿಯ ಕೊಳಲ ನಾದಕ್ಕೆ ಮಾರುಹೋದವಳು, ಅವನ ಬೆಚ್ಚಗಿನ ಸ್ಪರ್ಶಕ್ಕೆ ಮಾರುಹೋದವಳು, ನವಿರು ಪ್ರೀತಿಗೆ ಮನಸೋತವಳು.. ರಾಧೆ ಹೇಳುವ ಕಥೆ ಕಲುಕುತ್ತದೆ! ಕೊಳಲ ಬಿಸುಟು ಹೊರಟ ಕೃಷ್ಣನನ್ನು ಒಮ್ಮೆ ತಡೆದು ನಿಲ್ಲಿಸುವ ಮನಸ್ಸಾಗುತ್ತದೆ.. 'ಮಥುರೆಗೆ ಹೋಗಬೇಡವೋ ಮಾಧವಾ.. ರಾಧೆ ನೋಯುತ್ತಾಳೆ' ಎಂದು ಕೂಗಿ ಹೇಳುವ ಎಂದೆನಿಸುತ್ತದೆ. ಕಡಲು ಸೇರುವ ಮೊದಲೇ ನದಿ ಬತ್ತಿದಂತೆ  ಪ್ರೀತಿಯನ್ನು ಪೂರ್ಣವಾಗಿ ತನ್ನದಾಗಿಸಿಕೊಳ್ಳುವ ಮೊದಲೇ ರಾಧೆ ಏಕಾಂಗಿಯಾಗುತ್ತಾಳೆ.. ಕೊಳಲನೂದುವ ಉಸಿರಲ್ಲಿ ಬೆಂಕೆಯಿತ್ತೇ ಎಂಬುವಷ್ಟು ವಿರಹದಲ್ಲಿ ಬೇಯುತ್ತಾಳೆ! 'ಯಾಕಾಗಿ ಬಂದೆ ನೀನು ಕೇಶವ.. ಏನಾಗಿ ಹೋದೆ ನೀನು ಕೇಶವ..' ರಾಧೆ ಕಾಡುತ್ತಾಳೆ, ಕದಲಿಸುತ್ತಾಳೆ.. ಕೃಷ್ಣ ಕರಗುತ್ತಾನೆ, ಕಣ್ಣೀರಾಗಿಸುತ್ತಾನೆ.
ಮಂಡೋದರಿ, ಗಾಂಧಾರಿಯರು ತಮ್ಮ ಕಥೆಗಳನ್ನು ವಿಸ್ತರಿಸದಿದ್ದರೂ ನೋವಿನ ಮಜಲುಗಳನ್ನು ಉಂಡ ಕುರುಹಾಗಿ ನಾಟಕದುದ್ದಕ್ಕೂ ಆಗಾಗ ಸುಳಿದಾಡುತ್ತಿರುತ್ತಾರೆ..
ಪುರಾಣದ ಸ್ತ್ರೀ ಪಾತ್ರಗಳ ಭಾವಕ್ಕೆ, ನೋವಿಗೆ ದನಿಯಾಗುವಲ್ಲಿ, ಹೊಸದೊಂದು ಆಯಾಮವನ್ನೇ ಕಟ್ಟಿಕೊಡುತ್ತಾ ಆಲೋಚನಾ ಲಹರಿಯನ್ನು ಸೆಳೆಯುವಲ್ಲಿ ನಾಟಕ ರಚನಕಾರರು ಗೆದ್ದಿದ್ದಾರೆ. ಪಾತ್ರಗಳಿಗೆ ಇನ್ನಷ್ಟು ಜೀವ ತುಂಬಬೇಕಿತ್ತು, ಮತ್ತಷ್ಟು ಅನುಭವಿಸಬೇಕಿತ್ತು ಎಂಬ ಆಕ್ಷೇಪಣೆಯ ಹೊರತಾಗಿಯೂ ನಾಟಕ ಗೆಲ್ಲುತ್ತದೆ. ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಪ್ರಸಾಧನ ಎಲ್ಲವೂ ಅಚ್ಚುಕಟ್ಟು. ಒಟ್ಟಾರೆಯಾಗಿ 'ಅನಾಹತ' ಅವ್ಯಾಹತವಾಗಿ ಮನಸ್ಸನ್ನು ತುಂಬಿಕೊಳ್ಳುತ್ತದೆ.  

ಬದುಕೆಂಬ ಮಾಯೆಯ ಸುತ್ತ ಸಾವು ಕಟ್ಟುವ ಕಥೆ

ಬದುಕ ಒಂದು ದಡದಲ್ಲಿ ನಿಂತು ನೋಡಿದರೆ ಸಾವೆಂಬುದು ಒಮ್ಮೆ ಆಚೆ ದಡದಲ್ಲಿ ನಿಂತು ಕೈಬೀಸುವ ಅಪರಿಚಿತ, ಮತ್ತೊಮ್ಮೆ ಬಗಲಿನಲ್ಲಿಯೇ ಮಾತಿಗೆ ಕೂರುವಷ್ಟು ಆತ್ಮೀಯ. ಒಮ್ಮೆ ಕಂಡವರಾರೂ ತಿರುಗಿ ಬಂದು ವಿವರಿಸುವ ಸಾಹಸ ಮಾಡಿಲ್ಲವಾದ್ದರಿಂದ, ಸಾವೆಂಬುದು ಬದುಕಿರುವ ಎಲ್ಲ ಜೀವಿಗಳಿಗೂ  ಕಣ್ಣೆದುರಿಗಿದ್ದೇ ಕಾಣದಂತಿರುವ ಅತ್ಯದ್ಭುತ ವಿಸ್ಮಯ.  

ಬದುಕೆಂಬ ಮಾಯೆಯ ಸುತ್ತ ಸಾವು ಕಟ್ಟುವ ಕಥೆಯನ್ನು ರಂಗರೂಪವಾಗಿಸಿದರೆ ’ಮಹಾಮಾಯಿ’ ಪ್ರತ್ಯಕ್ಷಳಾಗುತ್ತಾಳೆ. ಊರಿನ ಜನರು ಅವಳಿಗಿಟ್ಟ ಹೆಸರು ’ಶೆಟವಿ ದೇವಿ’. ಸಾವಿನ ಅಧಿದೇವತೆ ಅವಳು.. ಸಂಜೀವಶಿವನೆಂಬ ಸಾಕು ಮಗ, ಗಿರಿಮಲ್ಲಿಗೆಯೆಂಬ ಸಹಾಯಕಿ. ಸಾವಿನ ತಾಯಿಯ ಮಗ ಜೀವ ಉಳಿಸುವ ವೈದ್ಯ! ಈ ವಿರೋಧಾಭಾಸವೇ ನಾಟಕದ ಮೂಲಧಾತು. ಸಂಜೀವಶಿವ ಒಮ್ಮೆ ನಾಡಿ ನೋಡಿದನೆಂದರೆ ಖಾಯಿಲೆ ಗುಣಮುಖವಾದಂತೆಯೇ ಲೆಕ್ಕ.. ಆದರೆ ಅವನು ನಾಡಿ ನೋಡುವುದಕ್ಕೆ ತಾಯಿಯ ಅಪ್ಪಣೆಯಾಗಬೇಕು. ಈ ಅಪ್ಪಣೆ ದೊರೆತ ನಂತರವೇ ವೈದ್ಯ ಮಾಡುವ ಪ್ರಕಿಯೆ ಸಂಜೀವಶಿವನಿಗೆ ವರವೂ ಹೌದು ಅಂತೆಯೇ ಸಂಕೋಲೆಯೇ ಹೌದು.. ಸ್ವಾತಂತ್ರ್ಯವೆಂಬ ಬದುಕನ್ನು, ಸಾವೆಂಬ ಸಂಕೋಲೆ ಇಂಚಿಂಚಾಗಿ ಆವರಿಸುವಾಗ ಚಡಪಡಿಸುವ ಸಂಜೀವಶಿವನ ಮನಸ್ಸು ಚಿನ್ನದ ಪಂಜರದೊಳಗಿನ ಹಸಿರು ಗಿಳಿ.. 
’ಬಂದೇ ಬರುತ್ತದೆಂದು ಗೊತ್ತಿರುವ ಸಾವನ್ನು ಕಾಯುವ ಶಿಕ್ಷೆ ಯಾರಿಗೂ ಬರಕೂಡದು’ ಎಂಬ ಪುಷ್ಪಗಂಧಿಯ ಆಳದ ಮಾತುಗಳು ಬದುಕಿನ ಕಟ್ಟಕಡೆಯ ತೀರದಲ್ಲಿ ನಿಂತಿರುವ ರಾಜಕುಮಾರಿ ಇರುವಂತಿಗೆಯ ಸ್ಥಿತಿಯನ್ನು ಒಂದೇ ವಾಕ್ಯದಲ್ಲಿ ವಿವರಿಸುತ್ತದೆ. ಜೀವನಪ್ರೀತಿಯನ್ನೆಲ್ಲಾ ತನ್ನೆದೆಗೇ ಬಸಿದುಕೊಂಡು , ಬದುಕಬೇಕೆಂಬ ತೀವ್ರ ಹಂಬಲವಿದ್ದಾಗಿಯೂ ; ಸಾವಿನ ನಾವೆಯನ್ನೇರುವ ಪಾರಿಜಾತದಂಥಾ ಹುಡುಗಿ ರಾಜಕುಮಾರಿ ಇರುವಂತಿಗೆ.  ಯಾವುದೋ ಮುಗ್ಧತೆಯ ಸೆಳವಿಗೆ ಒಳಗಾಗಿ ಸಾವಿನ ಗುಹೆಯೊಳಗೆ ನಡೆದುಬಿಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವೈದ್ಯ ಸಂಜೀವಶಿವನನ್ನು ಎದುರುಗೊಳ್ಳುತ್ತಾಳೆ. ಅದು ಬಿಡುಗಡೆಯ ಮೊದಲ ಹಂತ. ತಾಯಿಯ ಅಪ್ಪಣೆಗೆ ವಿರುದ್ಢವಾಗಿ ಇರುವಂತಿಗೆಯ ನಾಡಿ ಮಿಡಿತಕ್ಕೆ ಸ್ಪಂದಿಸುವ ಸಂಜೀವಶಿವ ಹಾಗೂ ಜೀವನೋತ್ಸಾಹವನ್ನು ಮರಳಿಪಡೆದು ಪ್ರೀತಿಯ ಮಾಯೆಗೆ ಸಿಲುಕುವ ರಾಜಕುಮಾರಿ. 
  ನಂತರದ್ದೆಲ್ಲಾ ಪ್ರೀತಿಯನ್ನು ಉಳಿಸಿಕೊಳ್ಳಲು ಸಾವಿನ ವಿರುದ್ಧ ಸೆಣಸಾಟಕ್ಕೆ ನಿಲ್ಲುವ ಸಂಜೀವಶಿವನ ಆತ್ಮಸ್ಥೈರ್ಯ ಹಾಗೂ ಇಚ್ಛಾಶಕ್ತಿಯ ವಿವರ ಸಂಕಲನ. ಸಂಜೀವಶಿವ ನಮ್ಮೆಲ್ಲರ ಪ್ರತಿರೂಪವಾಗಿ ಕಣ್ಣೆದುರಿಗೆ ನಿಲ್ಲುತ್ತಾನೆ. ಹೆಜ್ಜೆ ಹೆಜ್ಜೆಗೂ ತಾಯಿಯೆಂಬ ಮೋಹದೊಂದಿಗೆ, ಸಾವೆಂಬ ಮಾಯೆಯೊಂದಿಗೆ, ಅಧಿಕಾರವೆಂಬ ಬಲಿಷ್ಠ ಕೋಟೆಯೊಂದಿಗೆ ನಡೆಯುವ ಅವನ ಘರ್ಷಣೆಗಳು ತಿಳಿದೋ ತಿಳಿಯದೆಯೋ ನಮ್ಮ ಮನಸ್ಸಿನಲ್ಲೊಂದು ಕೋಲಾಹಲವನ್ನೆಬ್ಬಿಸುತ್ತವೆ. ಪ್ರೀತಿಗಾಗಿ, ಸ್ವಾತಂತ್ರ್ಯಕ್ಕಾಗಿ, ಸ್ವ ಇಚ್ಛೆಗಾಗಿ, ಸ್ವಾಭಿಮಾನಕ್ಕಾಗಿ ತುಡಿಯುವ ಅವನ ರೀತಿ ನಮ್ಮದೂ ಆಗಿಹೋಗುತ್ತದೆ.ಮೊದಲೆಲ್ಲೋ ಪೇಲವ ಎನಿಸುತ್ತಿದ್ದ ಅವನ ವ್ಯಕ್ತಿತ್ವ ನಾಟಕ ಮುಗಿಯುವ ಹೊತ್ತಿಗೆ ಪೂರ್ಣ ಪಾತ್ರವಾಗಿ ನಾಟುತ್ತದೆ. 
ಸಂಜೀವಶಿವನೊಡನೆ ಸೆಣಸುವ, ಪೆಟ್ಟಿಗೆ ಪ್ರತಿ ಪೆಟ್ಟು ನೀಡುವ, ಪದೇ ಪದೇ ಅವನ ಸಂಕಲ್ಪಕ್ಕೆ ಕಲ್ಲೆಸೆಯುವ ಶಕ್ತಿ ಮಹಾಮಾಯಿ! ಆ ಮಾಯೆ ಸಾವೋ, ನಮ್ಮೊಳಗಿನ ಅಂಧಕಾರವೋ, ಒಳಗೆ ಸುಪ್ತವಾಗಿರುವ ಅಹಂಕಾರವೋ ಅಥವಾ ನಮ್ಮೊಳಗಿನ ಸಾಮರ್ಥ್ಯವನ್ನು ಹೊರತರುವ ಸಲುವಾಗಿ ಕಣ್ಣೆದುರು ನಿಲ್ಲುವ ಪ್ರಬಲ ರೂಪವೋ ಎಂಬ ಗೊಂದಲ ಈ ಕ್ಷಣಕ್ಕೂ ಉಳಿದುಹೋಗಿದೆ. ಅವಳ ಭೀಕರ ರೂಪ, ಭಾವನೆಯೇ ಇಲ್ಲದಂತೆ ವರ್ತಿಸುವ , ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುವ ಅವಳದೇ ಅಂಶ , ಎಲ್ಲದರಾಚೆಗೆ ತಾಯಿಯೆಂಬ ಮಮತೆಯನ್ನು ಎದೆಯಾಳದಲ್ಲಿ ಬಚ್ಚಿಟ್ಟುಕೊಂಡಿರುವಂತೆ ಭಾಸವಾಗಿಸುವ ಮಹಾಮಾಯಿ ನಾಟಕ ಮುಗಿದ ಎಷ್ಟೋ ಹೊತ್ತಿನ ನಂತರ ಒಳಗಿನ ಯಾವುದೋ ಬಾಗಿಲು ದಾಟಿ ಹೊರನಡೆಯುತ್ತಾಳೆ. ಅವಳು ಹೊರನಡೆದ ಮೇಲೆಯೇ ಒಳಗಿದ್ದದ್ದು ಬರಿದೆ ಮಾಯೆ ಎಂಬ ಸತ್ಯ ಗೋಚರವಾಗುತ್ತದೆ. 
ಈ ಸಂಘರ್ಷಗಳ ನಡುವೆ ನಡೆಯುವ ಬದುಕ ಅಷ್ಟೇನೂ ಕಷ್ಟವಲ್ಲ ಎಂಬುದಕ್ಕೆ ಸುತ್ತಲಿನ ಪಾತ್ರಗಳು ಮೂಡಿಸುವ ಹಾಸ್ಯದ ತೆಳು ಅಲೆಯೇ ಸಾಕ್ಷಿ. ಪ್ರತಿ ಪಾತ್ರವೂ ಬದುಕ ಒಂದೊಂದು ಹಂತವನ್ನು ಪ್ರತಿಬಿಂಬಿಸುವಲ್ಲಿ ಗೆಲ್ಲುತ್ತದೆ ಹಾಗೂ ತನ್ಮೂಲಕ ನಾಟಕವನ್ನೂ ಗೆಲ್ಲಿಸುತ್ತದೆ. ಆ ನೆರಳು ಬೆಳಕಿನಾಟ, ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಬದಲಾಗೋ ಬಣ್ಣಬಣ್ಣದ ಚಿತ್ರಣ,ರಂಗತಂತ್ರ,ಪಾತ್ರಕ್ಕೆ ತಕ್ಕಂತೆ ಭೀಕರ, ಸಾತ್ವಿಕ, ಸಮಾಧಾನವೆನಿಸೋ ವಸ್ತ್ರ ಹಾಗೂ ಪ್ರಸಾಧನ ಪರಿಪೂರ್ಣತೆಯ ಹಾದಿಯಲ್ಲಿ ನಾಟಕವನ್ನು ಕೊಂಡೊಯ್ಯುತ್ತದೆ. ಪಾತ್ರಗಳು ಹಾಗೂ ಪಾತ್ರಧಾರಿಗಳು ನೋಡುಗರನ್ನು ರಂಗಲೋಕಕ್ಕೆ ಕೈ ಹಿಡಿದು ಕರೆದುಕೊಂಡು ಹೋಗುತ್ತಾರೆ.
ಒಟ್ಟಾರೆಯಾಗಿ ’ಮಹಾಮಾಯಿ’ ತಂಡ ಒಂದು ಅದ್ಭುತ ರಂಗಸಂಜೆಯನ್ನು, ರಂಗಾನುಭವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ :) 

ಇಟಲಿಯ ಕನವರಿಕೆಗಳು ಮುಂದುವರೆಯುತ್ತವೆ..

'ಅಮ್ಮಾ, ನಾ ಸಾಹಿತ್ಯ - ಚರಿತ್ರೆ ಓದ್ಕೊಂಡು ಉಪನ್ಯಾಸಕಿ ಆಗ್ಲಾ ಮುಂದ್ಯಾವತ್ತಾದರೂ ?' ಬಟ್ಟಲು ಕಂಗಳಲ್ಲಿ ಬಿಂಬಿಸಲು ಸಾಧ್ಯವಾಗದಿರೋ ಆಸೆಗಳ ಹೊತ್ತು ನಾ ಹೇಳ್ತಿದ್ರೆ ಅಮ್ಮ ಅಷ್ಟೇ ಆಸ್ಥೆಯಿಂದ ಕೇಳ್ತಾಳೆ..,  ಚರಿತ್ರೆಯ ಹೆಸರು ಕೇಳ್ದಾಗ್ಲೆಲ್ಲಾ ಮೈಯೊಮ್ಮೆ ಕಂಪಿಸೋದುಂಟು ನಂಗೆ! ಹಸಿರು-ಕಾಡು ಎಲ್ಲವೂ ಇಷ್ಟವೇ ಆದ್ರೂ ಪುರಾತನತೆ ಹೆಚ್ಚು ಆಪ್ತ.. ನಾ ಹಿಂದಿನ ಜನ್ಮದಲ್ಲಿ ಈ ಜಾಗದಲ್ಲೆಲ್ಲಾದ್ರೂ ನಡೆದಾಡಿದ್ನಾ ಎಂಬಷ್ಟರ ಮಟ್ಟಿಗೆ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕೋ ಹುಚ್ಚುತನ! ಪಳಿಯುಳಿಕೆಗಳು, ಶಿಲಾಶಾಸನಗಳು, ಭಿನ್ನವಾದ ವಿಗ್ರಹಗಳು ಸೆಳೆಯೋದೇ ಹೆಚ್ಚು.. ಇವತ್ತಿಗೂ ಯಗಚಿಯ ಹಿನ್ನೀರ ತೀರಕ್ಕಿಂತ, ಲಕ್ಯದ ಸೇತುವೆಗಿಂತ, ಕಡೆಗೆ ಗಿರಿಯ ನೀರವತೆಗಿಂತ ಬೇಲೂರಲ್ಲಿ ಸುಮ್ಮನೇ ಬಿದ್ದಿರೋ ಆ ಕಂಬಗಳ ಸಾಲೇ ಕಾಡತ್ತೆ ನನ್ನ.. 'ಈ ಕಂಬಗಳನ್ನೆಲ್ಲಾ ಕೊಡ್ತಾರಾ ಕೇಳಣ ಕಣೇ.. ನಮ್ಮನೆಗ್ ತಗೊಂಡು ಹೋಗ್ಬೇಕು ಅನ್ನಿಸ್ತಿದೆ ನಂಗೆ ' ಅಂತ ಏನೇನೋ ಮಾತಾಡಿ ಗೆಳತಿಯ ಹತ್ತಿರ ಬೈಸಿಕೊಂಡಿದ್ದಿದೆ.. ಅದ್ಯಾವುದೋ ಚಿತ್ರವನ್ನ ಕೇವಲ ಆ ನಟನಲ್ಲಿದ್ದ  ಪುರಾತನವಾದ ಕಂಬಗಳ ಬಗೆಗಿನ ಕನಸಿಗೇ ಹತ್ತಕ್ಕೂ ಹೆಚ್ಚು ಬಾರಿ ನೋಡಿದ್ದಿದೆ.. 
ನಾಗರೀಕತೆಗಳ ಬಗ್ಗೆ, ನದಿಯೊಂದು ದೇಶವ ಕಟ್ಟೋದರ ಬಗ್ಗೆ, ಧಾರ್ಮಿಕ ಆಚರಣೆಗಳ ಬಗ್ಗೆ ಓದಿದಷ್ಟೂ ಮುಗಿಯದ ಕುತೂಹಲ ನನ್ನಲ್ಲಿ! ಉತ್ಕಟತೆಯ ಕಡೆಯ ಹಂತವೇನೋ ಎಂಬುವಷ್ಟರ ಮಟ್ಟಿಗೆ ಸೆಳೆತ.. ಹಂಪಿ, ದುರ್ಗ, ಬೇಲೂರು, ಹಳೇಬೀಡು, ಕಾರ್ಕಳ, ಕೆಳದಿ, ಇಕ್ಕೇರಿ, ಮೈಸೂರು, ಶ್ರವಣಬೆಳಗೊಳ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಗುಲಬರ್ಗಾ.. ಎಲ್ಲವೂ ನನ್ನೊಳಗೊಂದು ಕೌತುಕವ ಮೂಡಿಸಿ ,ಇವತ್ತಿಗೂ ಕಾಡಿಸಿ, ಹೋದಾಗಲೆಲ್ಲಾ ಕಣ್ಣಂಚು ಒದ್ದೆಯಾಗಿಸೋ ಸ್ಥಳಗಳೇ! ಭಾರತದ ಮೂಲೆ ಮೂಲೆ ಸುತ್ತೋ ಆಸೆಯ ಜೊತೆಗೇ ಪರ ರಾಷ್ಟ್ರಗಳಿಗೂ ಹೋಗಿ ಅಲ್ಲಿಯದೊಂದಿಷ್ಟು ಕಾಡುವ ಭಾವಗಳ ನನ್ನದಾಗಿಸಿಕೊಳ್ಳಬೇಕೆಂಬ ಹಪಾಹಪಿ ಇಂದು ನಿನ್ನೆಯದಲ್ಲ.. ಸಾಂಸ್ಕ್ರತಿಕತೆಗಳು, ಸಂಪ್ರದಾಯಗಳು, ಮನಸ್ಥಿತಿಗಳು, ಜೀವನಪದ್ಧತಿಗಳ ಬಗ್ಗೆ ಅಧ್ಯಯನ ಮಾಡೋ ಹಂಬಲ ದಿನ ದಿನಕ್ಕೂ ಹೆಚ್ಚುತ್ತಲೇ ಇದೆ! ಇರಲಿ ಮುಂದ್ಯಾವತ್ತಾದರೂ ಈ ಕಂಗಳಲ್ಲೊಂದಿಷ್ಟು ಬೆರಗು ಹುಟ್ಟಿಸಿಕೊಂಡು ಅದ ನೋಡೋ ಸೌಭಾಗ್ಯ ನಂದಾಗಲಿ.. 
ಇವತ್ತು ನಾನಿಲ್ಲಿ ಹೇಳಲಿಕ್ಕೆ ಬಂದಿರೋ ಸಂಗತಿ ಇದಕ್ಕೆಲ್ಲಾ ಹತ್ತಿರದ್ದೇ.. ಭವ್ಯ ಭಾರತದ ಜೊತೆ ದಿವ್ಯ ಯೂರೋಪ್ ಸಹ ಅಷ್ಟೇ ಕದಲಿಸಿದ್ದಿದೆ ನನ್ನ! ವಿಶ್ವ ಪರ್ಯಟನೆಯ ಮೊದಲ ಭಾಗ ಯೂರೋಪೇ ಆದರೂ ಆಶ್ಚರ್ಯವೇನಿಲ್ಲ.. ಆಧುನಿಕತೆಯೇ ಆವರಿಸಿಕೊಂಡಿರುವ ಅಮೆರಿಕಾದಂತಹ ರಾಷ್ಟ್ರಗಳಿಗಿಂತ ತನ್ನೊಳಗೆ ಸಹಸ್ರ ಸಹಸ್ರ ಗೌಪ್ಯಗಳ ಇಂದಿಗೂ ಕಾಪಿಟ್ಟುಕೊಂಡು ಬಂದಿರೋ ಯೂರೋಪ್ ಅಚ್ಚರಿಯೆನಿಸುತ್ತೆ..  ಸಾಮಾಜಿಕವಾಗಿ, ರಾಜಕೀಯವಾಗಿ, ಐತಿಹಾಸಿಕವಾಗಿ ಏಷ್ಯಾದಿಂದ ವಿಭಿನ್ನವಾಗಿರೋ ಈ ದ್ವೀಪಕಲ್ಪ  ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತದೆ.. ಯೂರೋಪಿನ ಮುಖ್ಯ ಆಕರ್ಷಣೆಯೇ ಇಟಲಿಯೆಂದರೆ ತಪ್ಪಲ್ಲವೇನೋ! ರೋಮ್, ಫ್ಲಾರೆನ್ಸ್, ವೆನೀಸ್.. ಆಹ್!! ಕಣ್ಮುಂದೆಯೊಮ್ಮೆ ಸ್ವರ್ಗ ಹಾದು ಹೋದಷ್ಟು ಖುಷಿ.. ಎತ್ತರೆತ್ತರದ ಕಟ್ಟಡಗಳು, ನಿರ್ಮಾನುಶವೆನಿಸುವ ಬೀದಿಗಳು, ಆಕಾಶಕ್ಕೆ ಎರಡೇ ಹೆಜ್ಜೆ ಎಂದನಿಸೋ ಫ್ಲಾರೆನ್ಸ್ ನ ಎತ್ತರದ ದಿಬ್ಬ, ಮದಿರೆಯ ಅಮಲೇರಿಸೋ ಕ್ಷಣಗಳು.. ಸಾಗುತ್ತಲೇ ಹೋಗುತ್ತದೆ ಮೋಹಕತೆಯ ಪಟ್ಟಿ :) ಕ್ಯಾಥೋಲಿಕ್ ಚರ್ಚ್ ನ ಒಳಗೊಮ್ಮೆ ಕೂತು ಮೌನ ರಾಗವ ಧೇನಿಸೋ ಆನಂದವನ್ನ ಪದಗಳಲ್ಲಿ ವಿವರಿಸೋಕೆ ಸಾಧ್ಯವಾ? ನೀರೊಳಗರ್ಧ ಮುಳುಗಿರೋ ಮನೆಗಳಂತಹ ಕಟ್ಟಡಗಳ ನಡುವೆ ಹಾಯಿದೋಣಿಯಲ್ಲಿ ಹಾದುಹೋಗುವ ಅನುಭವವ ಜೊತೆಯಲ್ಲಿರುವವರಿಗೆ ವಿವರಿಸೋದಾದರೂ ಹೇಗೆ? ಅಲ್ಲೆಲ್ಲೋ ನಡುವೆ ಹಾದಿ ತಪ್ಪಿಸಿಕೊಂಡು ಒಮ್ಮೆ ಗೊಂದಲಕ್ಕೆ ಬಿದ್ದು ಮತ್ತೆ ಹುಡುಕಾಡಿ ಗಮ್ಯ ಸೇರೋವಾಗಿನ ರೋಮಾಂಚನವೆಲ್ಲಾ ಹರವಿಡಲಾರದ ಘಳಿಗೆಗಳೇ ಹೊರತು ಮತ್ತೇನಲ್ಲ.. ವಾಲಿದ ಗೋಪುರಕ್ಕೇನು ಕಮ್ಮಿ ಸೆಳೆಯೋ ಶಕ್ತಿಯಿದೆಯಾ? ಆ ವಾಸ್ತುಗಳನ್ನ ನೋಡುತ್ತಿದ್ದರೇ ಸಾಕು, ಮೈ ಮನವೆಲ್ಲಾ ಗರಿಗೆದರಲಾರಂಭಿಸುತ್ತದೆ.. ಗುರುತ್ವಾಕರ್ಷಣಾ ಶಕ್ತಿಯ ಅಳೆದು ತೂಗಿ ಹಾಗಿದ್ದೊಂದು ಗೋಪುರವ ಕಟ್ಟಬೇಕಾದರೆ ಅದೆಷ್ಟು ಆಲೋಚನಾ ಸರಪಳಿಗಳು ಸುತ್ತಿಕೊಂಡಿವೆಯೋ ಏನೋ ಎಂಬ ಯೋಚನೆಯೇ ಜುಮ್ಮೆನಿಸುತ್ತದೆ.. ಇನ್ನು ರೋಮ್ ಬಗ್ಗೆ ಮಾತನಾಡೋ ಅವಶ್ಯಕತೆಯೇ ಇಲ್ಲ! ಪದಕೋಶಗಳ ಮೀರಿ ಭಾವಭಿತ್ತಿಯೊಳಗೆ ನೆನಪುಗಳ ಮಹಾ ಸಾಗರವ ನಿರ್ಮಿಸೋ ಅದ್ಭುತ ನಗರ.. ಅಲ್ಲಿನ ಚೂಪು ಚೂಪು ಕಲಾಕೃತಿಗಳ ನೋಡುವಾಗೆಲ್ಲಾ ನನ್ನೂರಿನ ಗೋಲಾಕಾರದ ಕಮಾನಿನಂತಹ ರಚನೆಗಳು ನೆನಪಾಗುತ್ತವೆ! ಯಾಕೋ ಏನೋ ತಿಳಿದಿಲ್ಲ ನಂಗೆ.. ರೋಮ್ ಬಗ್ಗೆ ಬರೆಯಲು ಕುಳಿತರೆ ಪುಟಗಳು ಸಾಲದೇ ಹೋಗಬಹುದು ಅಥವಾ ಶಬ್ದಗಳು ಕರಗಿ ಹೋಗಬಹುದು.. 
ಜೀವನಶೈಲಿಯ ಬಗ್ಗೆ ಹೇಳುವುದಾದರೆ ತೀರಾ ವಿಚಿತ್ರವಲ್ಲದಿದ್ದರೂ ನಮಗೆ ಸಹ್ಯವಾಗುವಂತಹದ್ದಲ್ಲವೇನೋ! ಆಹಾರ ಪದ್ಧತಿಯಲ್ಲಿನ ನಿಸ್ಸಾರಗಳು ಒಂಥರಾ ಜಿಗುಪ್ಸೆ ಮೂಡಿಸುತ್ತವೆ.. 'ಅತಿಥಿ ದೇವೋ ಭವ' ಅನ್ನೋ ವಿಚಾರ ಸರಣಿಗಳ ನಡುವೆ ಬೆಳೆದ ಭಾರತೀಯರಾದ ನಮಗೆ ವಾಸ್ತವಕ್ಕೆ ಹತ್ತಿರವಾಗಿ ಬದುಕೋ, ವಿಶೇಷವೆನಿಸೋ ಆದರಾತಿಥ್ಯಗಳ ತೋರದಿರೋ ಆ ನೆಲ ಕಸಿವಿಸಿಯ ಛಾಯೆಯನ್ನೊಮ್ಮೆ ಮೂಡಿಸಿಹೋಗುತ್ತದೆ.. ಇದೆಲ್ಲದರ ಹೊರತಾಗಿಯೂ ಯೂರೋಪಿಯನ್ನರ ಬದುಕು ನಮ್ಮನ್ನೊಮ್ಮೆ ಕಲುಕಿ ಹೋಗದಿರೋ ಸಾಧ್ಯತೆಗಳೇ ಕಮ್ಮಿ! ಜನರ ಭಾವಗಳ ತೀರಾ ಹತ್ತಿರದಿಂದ ನೋಡೋ ನಂಗೆ ಮಾತ್ರ ಈ ತರದ ಅನುಭವವಾ ಗೊತ್ತಿಲ್ಲ ನಂಗೆ..!! ಕಡೆಗೂ ಇಟಲಿ ಭ್ರಮ ನಿರಸನವಾಗದಂತೆ ಮತ್ತೆ ತನ್ನೆಡೆಗೆ ಬರುವಂತೆಯೇ ಮಾಡುತ್ತದೆಯೇ ಹೊರತು ಆಕರ್ಷಣೆಯ ಪ್ರಮಾಣ ಎಳ್ಳಷ್ಟೂ ಕಮ್ಮಿಯಾಗುವುದಿಲ್ಲ.. 
ಇಟಲಿಯೆಂಬ ಮಹಾನಗರ ಅದರೊಳಗೆ ನನ್ನ ಸೆಳೆದುಕೊಂಡ ಪರಿಯಿದು! ಅಪ್ಪ ಆಗಾಗ ಹೇಳ್ತಿದ್ದ ಮಾತುಗಳು ಕಿವಿಯಲ್ಲಿ ಅನುರಣಿಸುತ್ತಿದೆ.. 'ಯಾವುದೇ ಜಾಗ, ಅನುಭವಗಳು ನಮ್ಮದಾಗಬೇಕಾದರೆ ನಾವೇ ಅಲ್ಲಿಗೆ ಹೋಗಬೇಕೆನ್ನೋ ಅಗತ್ಯವಿಲ್ಲ.. ಅನುಭವದ ಕಥೆಗಳನ್ನ ಮನಸ್ಸಿಟ್ಟು ಕೇಳಿದರೆ ಸಾಕು ' ಎಂದು.. ಹೌದಲ್ಲವಾ? ಗೆಳೆಯ ಇಟಲಿಗೆ ಹೊರಟಾಗ ಸಂಭ್ರಮ ಮಗ್ಗುಲಾಗಿ ನನ್ನೆಡೆಗೆ ಹೊರಳಿತ್ತು! ಈ ಹೊತ್ತಿಗೆ ಅವನ ಅನುಭವಗಳ ಕಥೆಗಳು ಮನಃ ಪಟದಲ್ಲಿ ಎಂದೂ ಕಾಣದ ಇಟಲಿಯನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿವೆ! ಫೋಟೋ, ವೀಡಿಯೋಗಳ ಜೊತೆಗೆ ಅವನಲ್ಲಿನ ಭಾವ ಬದಲಾವಣೆಯೂ ನನ್ನನ್ನಿಷ್ಟು ಬರೆಯೋ ಹಾಗೆ ಮಾಡ್ತು ಎಂದರೆ ಅತಿಶಯೋಕ್ತಿಯೇನಲ್ಲ! ಮಹಾನಗರಕ್ಕೆ ಪ್ರದಕ್ಷಿಣೆ ಹಾಕೋ ಸುಸಮಯ ಬೇಗನೇ ಬರಲಿ ನಂಗೆ ಅನ್ನೋದೇ ದಿನ ನಿತ್ಯದ ಪ್ರಾರ್ಥನೆಯಾಗಿ ಹೋಗಿದೆ.. 
ನಿಜವಾಗಿ ಆ ದೇಶವನ್ನ  ಕಣ್ತುಂಬಿಕೊಳ್ಳಬೇಕೆನ್ನೋ ತುಡಿತ ಕ್ಷಣ ಕ್ಷಣಕ್ಕೂ ತೀವ್ರಗೊಳ್ಳುತ್ತಿದೆ ನನ್ನೊಳಗೇ.. ಕಾಲಮಾನದ ಅಂತರ ಮೂರೂವರೆ ಗಂಟೆಯಾದರೂ ನನ್ನೂರಿಗೂ ಅಲ್ಲಿಗೂ ಇರೋ ವ್ಯತ್ಯಾಸ ಅಜಗಜಾಂತರ.. ಗೆಳೆಯನೇ ಆ ದೂರದೂರಿನಿಂದ ತಂದಿರೋ ಪ್ರಾಚೀನತೆಯ ಪ್ರತೀಕವಾಗಿರೋ ಗಡಿಯಾರ ಟಿಕ್ ಟಿಕ್ ಅಂತಿದ್ರೆ ಎದೆಗೂಡಿಗೂ ಆ ಉಡುಗೊರೆಗೂ ಬೆಸೆದಿರೋ ನಂಟು ಮತ್ತೆ ಮತ್ತೆ ನನ್ನಲ್ಲಿಷ್ಟು ಜೀವ ಸಂವೇದನೆಗಳ ಉಂಟು ಮಾಡಿ ಹೋಗ್ತಿದೆ! ಮುಂದೆ ಇಟಲಿಗೆ ಹೋದಾಗ ಆ ನವಿಲು ಮೈಯ ಗಡಿಯಾರ ಸಮಯ ತೋರಿಸುತ್ತೆ ನಂಗೆ ಅನ್ನೋ ಕಂಪನದೊಂದಿಗೆ ಇಟಲಿಯ ಕನವರಿಕೆಗಳು ಮುಂದುವರೆಯುತ್ತವೆ.. :)

ಸೋಮವಾರ, ಮಾರ್ಚ್ 7, 2016

ಮಹಾದೇವನೊಳಗೊಬ್ಬ ಮಾನವ.. :)

ಮನುಷ್ಯರಲ್ಲಿ ದೈವವ ಹುಡುಕೋದಕ್ಕಿಂತ ದೇವರಲ್ಲಿ ಮಾನುಷ ಛಾಯೆಯ ಹುಡುಕೋದೆ ಜಾಸ್ತಿ ನಾನು! ದೇವರಿಗೂ ಮನಸ್ಸಿದ್ದೀತಲ್ವಾ, ಶಾಪ-ವರಗಳ ಹೊರತಾಗಿಯೂ ಭಗವಂತನಿಗೊಂದು ಬದುಕಿದ್ದೀತಲ್ವಾ ಅಂತೆಲ್ಲಾ ಯೋಚಿಸುವಾಗ ವಿಷ್ಣು ವಾಸ್ತವಕ್ಕೆ ದೂರ ಎನ್ನಿಸಿ ಶಿವ ಆಪ್ತನೆನಿಸುತ್ತಾನೆ. ಬೇಸರವೆನಿಸೋ ಸಂಜೆಗಳಲ್ಲೆಲ್ಲಾ ರಾಗವೊಂದನ್ನು ಹುಡುಕಿ ಮೋಹಕತೆಯೊಂದಿಗೆ ಬಳಿ ಬರೋ ಗೆಳೆಯ ಕೃಷ್ಣನಾಗುತ್ತಾನೆ ; ಸದಾ ಜೊತೆಗಿದ್ದು ಕಷ್ಟಕ್ಕೆ ಹೆಗಲು ಕೊಡೋ ಬಂಧು ಶಂಕರನಾಗುತ್ತಾನೆ :) 

ಹರನೆಂದರೆ ನನ್ನ ಪಾಲಿಗೆ ಕೋಪಿಷ್ಠ ತಂದೆ , ಪತ್ನಿಯನ್ನು ಅತಿಯಾಗಿ ಪ್ರೀತಿಸೋ ಆದರ್ಶ ಪತಿ , ಪ್ರಿಯತಮೆಯನ್ನು ತಲೆಯ ಮೇಲೆ ಹೊತ್ತು ತಿರುಗುವ ಭಾವುಕ ಪ್ರೇಮಿ,  ತನ್ನ ಬಂಧು-ಬಾಂಧವರ ಒಳಿತಿಗಾಗಿ ವಿಷವನ್ನೂ ಲೆಕ್ಕಿಸದೆ ಕುಡಿದ ಅದ್ಭುತ ಮನಸ್ಸಿನ ವ್ಯಕ್ತಿ , ಕಲ್ಮಶ ಬೆರೆಸದೆ ಕೇಳಿದ ಪ್ರತೀ ಆಸೆಯನ್ನೂ ನಿಮಿಷಾರ್ಧದಲ್ಲಿ ಪೂರೈಸೋ ಭೋಳೇಶಂಕರ <3 ಕಣ್ಣುಗಳಲ್ಲಿ ಕಮಲದ ಹೊಂಬೆಳಕ ಬದಲಾಗಿ ಬೆಂಕಿಯ ಕಿರಣಗಳಿವೆ ಆದ್ದರಿಂದಲೇ ಇವನು ಫಾಲನೇತ್ರ.. ತಲೆಗೊಂದು ಕಿರೀಟ, ಕೈಗೊಂದು ತೋಳಬಂಧಿ, ಸೊಂಟಕ್ಕೊಂದು ಪಟ್ಟಿ , ಬಣ್ಣ ಬಣ್ಣದ ಜರತಾರಿ , ರೇಷಿಮೆ ಪಂಚೆ; ಊಹೂಂ.. ಇದ್ಯಾವುದೂ ಸಲ್ಲ ಇವನಿಗೆ! ಬೇಕಾದಹಾಗೆ ಕೂದಲು ಬಿಟ್ಟು, ಅರ್ಧ ಚಂದ್ರನನ್ನು ಸಿಗಿಸಿಕೊಂಡು, ಇಷ್ಟವಾದ ಹಾಗೆ ಬದುಕೋ ಇವನು ಜಟಾಜೂಟಾಧಾರಿ.. ರಾಜವೈಭೋಗಗಳು ಬೇಕಿಲ್ಲದ, ಅರಮನೆಯ ಅಗತ್ಯವಿಲ್ಲದ ಇವನು ಸ್ಮಶಾನವಾಸಿ.. ಅದೆಷ್ಟು ಸರಳ ಶಿವನ ಬದುಕು :) ಪ್ರೀತಿಯ ಮಡದಿ, ಮುತ್ತಿನಂಥಾ ಮಕ್ಕಳು, ಹೆಗಲಿಗೆ ಹೆಗಲು ನೀಡೋ ನಂದಿ-ಭೃಂಗಿಯಂಥಾ ಸ್ನೇಹಿತರು! 'ನಮ್ಮ ಸಂಸಾರ- ಆನಂದ ಸಾಗರ' ಅನ್ನೋ ಸಾಲುಗಳು ಗಿರಿಜಾವಲ್ಲಭನನ್ನು ನೋಡಿಯೇ ಬರೆದಿರಬೇಕು ಅನ್ನೋ ಅನುಮಾನ ಆಗಾಗ ಸುಳಿದುಹೋಗಿದ್ದಿದೆ ನನ್ನಲ್ಲಿ.. 

ಅದೆಂತಹ ಅನುರೂಪದ ದಾಂಪತ್ಯ ದಾಕ್ಷಾಯಿಣಿ ಹಾಗೂ ಶಂಕರನದ್ದು! ತುಂಬು ಗರ್ಭಿಣಿಯನ್ನು ಯಾರದೋ ಮಾತು ಕೇಳಿ ಕಾಡಿಗಟ್ಟಿದ ರಾಮನಿಗಿಂತ, ಸತಿಯ ವಿರಹ ತಾಳಲಾರದೆ ಅಖಂಡ ತಪಸ್ಸಿಗೆ ಕುಳಿತ ಶಿವ ಇಷ್ಟವಾಗುತ್ತಾನೆ. ಬದುಕಲ್ಲಿ ಕಷ್ಟ- ಸುಖಗಳನ್ನು ಹಂಚಿಕೊಳ್ಳುವುದು ಎಲ್ಲರಿಗೂ ತಿಳಿದ ವಿಷಯವೇ ಆದರೆ ದೇಹದಲ್ಲೂ ಅರ್ಧಪಾಲನ್ನು ನೀಡಿ ಅರ್ಧನಾರೀಶ್ವರನಾದ ಉಮಾಪತಿ ಸೋಜಿಗವೆನಿಸುತ್ತಾನೆ. ಕೋಪದ ಪರಾಕಾಷ್ಠೆಯ ತಲುಪಿ ರುದ್ರನರ್ತನ ಮಾಡೋ ಕಾಲಭೈರವ, ಪ್ರೀತಿ-ಭಕ್ತಿಗೆ ಕರಗಿ ಸೌಮ್ಯ ಸ್ವರೂಪಿಯಾಗೋ ನಟರಾಜ ನಮ್ಮನೆಯೊಳಗೊಬ್ಬನೆನಿಸುತ್ತಾನೆ. ಅವನ ಗಾಂಭೀರ್ಯ, ಮಕ್ಕಳೊಡಗೂಡಿ ಆಡುವ ವಾತ್ಸಲ್ಯ, ಮುಂಗೋಪದಿಂದೊಮ್ಮೆ ಬೈದು ಮತ್ತೊಮ್ಮೆ ಸಮಾಧಾನಿಸೋ ಪರಿ  ತ್ರಿಶೂಲಧಾರಿಯೊಳಗಿನ ತಂದೆಯ  ಮುಗ್ಧತೆಯನ್ನು ಅನಾವರಣಗೊಳಿಸುತ್ತದೆ. ಭಂಗಿ ಸೇದುತ್ತಾ ಗಣಗಳ ಜೊತೆಗೆ ಊರೂರು ತಿರುಗಬೇಕಾದರೆ ಸ್ನೇಹಮಯ ನಾಯಕನಾಗಿ ಗೋಚರವಾಗುತ್ತಾನೆ. ಭಾವನೆಗಳ ಅಸಮತೋಲನೆಗೆ ಸಾಕ್ಷಿಯಾಗಿ ಮತ್ತೆ ಸ್ಥಿತಪ್ರಜ್ಞತೆಗೆ ಮರಳಿ ಬದುಕಿನ ಗತಿಯನ್ನು ಕಾಪಾಡಿಕೊಳ್ಳುವುದರಿಂದಲೇ ಲಯಕರ್ತನೆನಿಸುತ್ತಾನೆ. ಮಾನವ ಸಹಜ ಗುಣಗಳ ಪ್ರತಿರೂಪದಂತೆ ಕಾಣುವುದರಿಂದಲೇ ದಿಗಂಬರನಾದ ಈಶನು ನಮ್ಮೊಳಗೆ ಇಳಿದುಹೋಗುತ್ತಾನೆ. ಹೀಗೆಲ್ಲಾ ಸಾಮಾನ್ಯರ ಕೈಗೆಟುಕುವುದರಿಂದಲೇ ಏನೋ ಜಿ.ಎಸ್.ಎಸ್ ರವರು 
ಬಾಂದಳ ಚುಂಬಿತ ಶುಭ್ರ ಹಿಮಾವೃತ
ತುಂಗ ಶೃಂಗದಲಿ ಗೃಹವಾಸಿ |
ದೀನ ಅನಾಥರ ದುಖಿಃ ದರಿದ್ರರ 
ಮುರುಕು ಗುಡಿಸಿಲಲಿ ಉಪವಾಸಿ || 
ಎಂದಿದ್ದಾರೆ..  

ಶಿವರಾತ್ರಿಯೆಂಬುದು ದಕ್ಷನನ್ನು ದಹಿಸಿ ವೀರಭದ್ರನಾಗಿದ್ದಕ್ಕೋ, ಹಾಲಾಹಲವನ್ನು ಕುಡಿದು ನೀಲಕಂಠನಾಗಿದ್ದಕ್ಕೋ, ಶಿವೆಯ ಜೊತೆಗೂಡಿ ತಾಂಡವ ನೃತ್ಯವಾಡಿದ್ದಕ್ಕೋ ; ಕಾರಣಗಳು ನೂರಿರಬಹುದು.. ಎಲ್ಲವನ್ನು ಮೀರಿ ಲೋಕಪಾಲನಾದ, ಆದರ್ಶಪ್ರಾಯನಾದ ಶ್ರೀಕಂಠ ನೆನಪಾಗುತ್ತಾನೆ :) ಎಲ್ಲರೊಳಗೆ ಸರ್ವವ್ಯಾಪಿಯಾದ, ಸರ್ವೇಶ್ವರನಾದ , ಸರ್ವಜ್ಞಾನಿಯಾದ ಸದಾಶಿವ ಆವಿರ್ಭಾವಗೊಳ್ಳಲಿ.. ತನ್ಮೂಲಕ ಉತ್ಕೃಷ್ಟ ಜೀವನದ ಅನುಭವವಾಗಲಿ ಎಂಬ ಶುಭಹಾರೈಕೆಗಳೊಂದಿಗೆ ಶಿವರಾತ್ರಿಯ ಶುಭಾಶಯಗಳು.. :) :) :)

ಶುಕ್ರವಾರ, ನವೆಂಬರ್ 13, 2015

ಭ್ರಾತೃ ಬಿದಿಗೆ

ಭ್ರಾತೃ ಬಿದಿಗೆ :
     ಭ್ರಾತೃ ಬಿದಿಗೆಯಂತೆ ಇಂದು!! ಯಮ ಧರ್ಮರಾಜ ತನ್ನ ತಂಗಿಯ ಮನೆಗೆ ಹೋಗಿ ಸಕಲಾದರಗಳನ್ನು ಸ್ವೀಕರಿಸಿ , ಹರಸಿ ಹಾರೈಸಿ ಬರುತ್ತಾನಂತೆ. ಅದೆಷ್ಟು ಚಂದವಲ್ಲವಾ ಸಂಪ್ರದಾಯಗಳು, ಹಬ್ಬಗಳು, ಅವುಗಳ ಹಿಂದಿನ ಕಥೆಗಳು :) ದೇವರಲ್ಲಿಯೂ ಮನುಷ್ಯತ್ವದ ಎಳೆ ಹುಡುಕಿ, ಅವರಲ್ಲಿನ ಸಂಬಂಧಗಳಿಗೂ ಬೆಲೆ ಕೊಟ್ಟು ಅದರ ಸುತ್ತೊಂದು ಕಥಾ ಹಂದರವ ಹೆಣೆದು ಸಂಸ್ಕೃತಿಯ ನೆಪದಲ್ಲಿ ನಮ್ಮೆದುರಿಡುವುದು ಅದ್ಭುತವೇ ಸೈ. ಧನುರ್ಧಾರಿ ದಾಶರಥಿಗಿಂತ ಸಂಸಾರಸಮೇತನಾಗಿ ನಿಂತ ಪ್ರೇಮಮೂರ್ತಿ ಶ್ರೀರಾಮಚಂದ್ರನೇ ಹೆಚ್ಚು ಆಪ್ತವಾಗುತ್ತಾನೆ ಎಂಬ ಹೆಚ್.ಎಸ್ ವೆಂಕಟೇಶಮೂರ್ತಿಯವರ ಮಾತುಗಳು ನೆನಪಾಗುತ್ತದೆ. ಯಮ ಇದ್ದಾನೋ ಇಲ್ಲವೋ ಎಂಬುದೇ ಗೊಂದಲವಾಗಿರುವಾಗ, ಆ ಯಮನಿಗೊಬ್ಬಳು ತಂಗಿ ಬೇರೆ!! ಪ್ರತೀ ಹಬ್ಬಕ್ಕೂ ತನ್ನದೇ ವೈಶಿಷ್ಟ್ಯ, ವಿಭಿನ್ನತೆ. ಆದರೆ ಅದರ ಹಿಂದಿರುವ ಹೂರಣವ ಗಮನಿಸಹೋದರೆ ಅಚ್ಚರಿಯಾಗುತ್ತದೆ. ಕೃಷಿ ಪ್ರಧಾನವಾದ ನಮ್ಮ ನಾಡಲ್ಲಿ ಕಾರ್ತಿಕವೆಂದರೆ ಒಂಥರಾ ವಿರಾಮದ ಸಮಯ. ಸುಗ್ಗಿಯಲ್ಲಿನ ಮೈಮುರಿಯುವ ಕೆಲಸವೆಲ್ಲಾ ಮುಗಿದು, ಅಡಿಕೆ ಕೊಯ್ಲಿಗೂ ಮುನ್ನ ಒಂದಿಷ್ಟು ವಿಶ್ರಾಂತಿ ಪಡೆಯೋ ಹೊತ್ತು. ಅಣ್ಣ ಎನಿಸಿಕೊಂಡವನಿಗೂ ಮದುವೆಯಾಗಿ ಗಂಡನ ಮನೆಯಲ್ಲಿರೋ ತಂಗಿಯ ನೆನಪಾಗುವುದರಲ್ಲಿ ತಪ್ಪೇನಿಲ್ಲ! ಇತ್ತ ತಂಗಿಯೂ ಬೇಗ ಕತ್ತಲಾಗೋ ನೆಪದಲ್ಲಿ ಮನೆಯ ಕೈಂಕರ್ಯಗಳನ್ನೆಲ್ಲಾ ಸರಸರನೆ ಮುಗಿಸಿ ತಂಪು ಸಂಜೆಯಲ್ಲಿ ತವರ ಕನವರಿಸೋ ಸಂದರ್ಭ. ದೀಪಾವಳಿಯ ಸಂಭ್ರಮ ಸಡಗರಗಳ ಜೊತೆಗೆ ತವರೂರಿಂದ ಅಣ್ಣನೂ ಬಂದರೆ ಖುಷಿಯ ಕಡೆಯ ಹಂತ ಅವಳಿಗೆ. ಅಮ್ಮನೋ-ಹೆಂಡತಿಯೋ ಬಲಿಪಾಡ್ಯಮಿಗೆಂದು ತಯಾರಿಸಿದ ಬಗೆ ಬಗೆಯ ಸಿಹಿ ತಿನಿಸುಗಳನ್ನೆಲ್ಲಾ ಕಟ್ಟಿಕೊಂಡು ತಂಗಿಯ ಮನೆಗೆ ಹೋಗುವ ಆನಂದ ಅಣ್ಣನಿಗೆ. ತಂಗಿಯ ಮನೆಯ ಸೌಭಾಗ್ಯವ ಅಣ್ಣ ಕಣ್ತುಂಬಿಕೊಳ್ಳಬೇಕು, ಅವಳ ನೋವುಗಳಿಗೊಂದಿಷ್ಟು ಸಾಂತ್ವನ ಹೇಳಬೇಕು ಜೊತೆ ಜೊತೆಗೇ ತಂಗಿಯ ಬೆಂಬಲಕ್ಕೆ ನಾವಿದ್ದೇವೆ ಎಂಬ ಸೂಕ್ಷ್ಮವ ಬೀಗರಿಗೆ ರವಾನಿಸಬೇಕು.. ಇತ್ತ ತಂಗಿಯೂ ಒಂದಿಷ್ಟು ಭಾವ ಕಳವಳಗಳ ಹೊರಹಾಕಬೇಕು, ತಾನು ಸುಖದಲ್ಲಿದ್ದೇನೆ ಎಂಬ ವಿಷಯವ ಅಣ್ಣನ ಮೂಲಕ ಅಪ್ಪ-ಅಮ್ಮನಿಗೆ ತಲುಪಿಸಬೇಕು ಹಾಗೆಯೇ ಗಂಡನ ಮನೆಯವರ ಮುಂದೆ ತನ್ನ ತವರಿನ ಸಿರಿಯ ಕೊಂಡಾಡಬೇಕು. ಅಣ್ಣನಿಗೆ ಏನಿಷ್ಟವೋ ಅದನ್ನೆಲ್ಲಾ ಕೈಯ್ಯಾರೆ ಮಾಡಿ ತನಗೆ ತೃಪ್ತಿಯಾಗುವವರೆಗೆ ಬಡಿಸಿ ಕೈತುಂಬಾ ದಕ್ಷಿಣೆ ನೀಡಿ ಸಂಭ್ರಮಿಸಬೇಕು. ಊಟದ ಮಧ್ಯ ತವರಿನ ಕಥೆಗಳ ಕೇಳಿ ಖುಶಿಸಬೇಕು! ಲಂಗ ದಾವಣಿಯುಟ್ಟು ತನ್ನ ಮುಂದೆಯೇ ಕುಣಿಯುತ್ತಿದ್ದ, ಮಾತು ಮಾತಿಗೂ ಮೂತಿ ದೊಡ್ಡ ಮಾಡಿ ಅಳುತ್ತಿದ್ದ ಹುಡುಗಿ ಸಂಸಾರದ ಭಾರವ ನಿಭಾಯಿಸುವ ಪರಿ ನೋಡಿ ಅಣ್ಣನಿಗೆ ಅಚ್ಚರಿಯಾದರೆ ; ಜಡೆ ಎಳೆದು ಕಾಟ ಕೊಡುತ್ತಿದ್ದ, ಸದಾ ಕಿತ್ತಾಡುತ್ತಿದ್ದ ಅಣ್ಣ ಜವಾಬ್ದಾರಿಯುತ ವ್ಯಕ್ತಿಯಾದ ಬಗೆಗಿಷ್ಟು ಬೆರಗು ತಂಗಿಯಲ್ಲಿ. ಕಡೆಗೆ ಮರಳುವಾಗ, ಅಣ್ಣ 'ಬೆಳೆದ ಮನೆಗೂ ಸೇರಿದ ಮನೆಗೂ ದೀಪವಾಗು ತಾಯಿ' ಎಂದು ಹರಸಿ ಹಾರೈಸುವಾಗ ಕಣ್ತುಂಬಿಕೊಳ್ಳುವ ಕ್ಷಣವನ್ನ ಪದಗಳಲ್ಲಿ ಹಿಡಿದಿಡಲು ಸಾಧ್ಯವಾ? ನಾಗರ ಪಂಚಮಿಗೆ ಭಂಡಾರ ಒಡೆಯಲು ಬಂದು ಹೋದ ಅಣ್ಣ ಮತ್ತೆ ಭ್ರಾತೃ ಬಿದಿಗೆಗೇ ಬರುವುದು. ಒಂದೊಂದು ಮಾಸಕ್ಕೆ ಒಂದೊಂದು ಕಾರಣ ಹುಡುಕಿ ತವರು ಮನೆಯ ಹಾದಿ ಕಾಯೋ ಹೆಣ್ಣಿನ ತಳಮಳಗಳು ಅವಳಿಗೆ ಮಾತ್ರ ಅರ್ಥವಾಗೋ ಸಂಗತಿ.
      ಆಧುನಿಕತೆಯೇ ಮೈತಳೆದಂತಿರೋ ಈ ಘಳಿಗೆಯಲ್ಲಿ ವಾಟ್ಸಾಪ್ನಲ್ಲೋ, ಫೇಸ್ಬುಕ್ನಲ್ಲೋ  'ಹ್ಯಾಪಿ ಭ್ರಾತೃ ಬಿದಿಗೆ' ಅಂತಲೋ, 'ಮಿಸ್ಸಿಂಗ್ ಯೂ' ಅಂತಲೋ ಒಂದು ಪೋಸ್ಟ್ ಬರೆದು ಸುಮ್ಮನಾಗೋ ಜನಗಳ ಅಂತರಂಗವ ಹೊಕ್ಕು ನೋಡಬೇಕಿದೆ ಆ ಪ್ರೀತಿಯ ಭಾವ ಅರಿಯಲು. ಕಾಲಿಗೆ ಚಕ್ರ ಕಟ್ಟಿಕೊಂಡು ಓಡೋ ಈ ಯುಗದಲ್ಲಿ ಇಷ್ಟಾದರೂ ಮಾಡುತ್ತಾರಲ್ಲಾ ಎಂದು ಸಂಭ್ರಮಿಸಬೇಕೋ ಅಥವಾ ಬಂಧ-ಬಾಂಧವ್ಯಗಳ ಹುಡುಕುತ್ತಾ ಕೊರಗಬೇಕೋ ಎಂಬುದರ ನಡುವಿನ ಗೊಂದಲ ನನ್ನದು. ಕಾರಣಗಳೇನೇ ಇರಲಿ ಭ್ರಾತೃ ಬಿದಿಗೆಯಂದು ನಂಗಿಲ್ಲದ ಅಣ್ಣ ನೆನಪಾಗುತ್ತನೆಂಬುದಂತೂ ಸತ್ಯ. ಅಣ್ಣ-ತಮ್ಮಂದಿರಿಲ್ಲದೇ ಬೆಳೆದ ನಂಗೆ ಈ ಭಾವಗಳೆಲ್ಲಾ ತಿಳಿದಿಲ್ಲವಾದರೂ ಹೀಗಿದ್ದಿರಬಹುದು ಎಂದು ಕಲ್ಪನೆ ಮೂಡುವಂತೆ ಮಾಡಿದ್ದು ಅಣ್ಣ-ತಮ್ಮಂದಿರನ್ನು ಬೆಳಗ್ಗಿನಿಂದಲೂ ಕನವರಿಸುತ್ತಿದ್ದ ನಾನಿರುವ ಪಿ.ಜಿಯ ಮನೆಯೊಡತಿ.. ಅಣ್ಣ ಮಾತ್ರವಲ್ಲ ತಮ್ಮನೂ ಆಗಬಹುದು ಕಣೇ ಎಂದವರಂದರೂ ಯಾಕೋ ನಂಗ್ಯಾವತ್ತೂ ತಮ್ಮ ಇರಬೇಕೆಂಬ ಭಾವ ಕಾಡಿಲ್ಲವಾದ್ದರಿಂದ ಬರಹದ ತುಂಬೆಲ್ಲಾ ಅಣ್ಣನೇ ತುಂಬಿಕೊಳ್ಳುತ್ತಾ ಹೋದ..
      ವಿಪರ್ಯಾಸವೆಂದರೆ ಹೊತ್ತುರಿಯುತ್ತಿರುವ ಘರ್ಷಣೆಗಳ ಪರಿಣಾಮವಾಗಿ ಈ ಬಾರಿಯ ಬಿದಿಗೆಗೆ ಯಮಧರ್ಮರಾಯನಿಗೂ ತಂಗಿಯ ಮನೆಗೆ ಹೋಗಲು ಸಾಧ್ಯವಾಗಲಿಲ್ಲವೇನೋ! ಧರ್ಮದ ದಳ್ಳುರಿಯಲ್ಲಿ ಬೇಯುತ್ತಿರುವ ಮನಸುಗಳಿಗೆಲ್ಲಾ ಬಿದಿಗೆಯ ಚಂದ್ರ ತಂಪು ನೀಡಲಿ. ವ್ಯಕ್ತಿಪೂಜೆಯ ಹೊರತಾಗಿ ವ್ಯಕ್ತಿತ್ವವನ್ನು ಆರಾಧಿಸೋ ವಿವೇಕ ಎಲ್ಲ ಗೌರವಾನ್ವಿತ ಘನತೆವೆತ್ತ ಜನಗಳಿಗೆ ಲಭಿಸಲಿ. ಯಾರ ಭಾವನೆಗಳಿಗೂ ನೋವುಂಟು ಮಾಡದೇ ಉತ್ಸವವಾಗಲೀ, ಜಯಂತಿಯಾಗಲಿ ಆಚರಿಸೋ ಪ್ರಜ್ನೆ ಸರ್ವರಿಗೂ ಮೂಡಲಿ ಎಂಬ ಸದಾಶಯದೊಂದಿಗೆ..
ಪ್ರೀತಿಯಿಂದ
ಲಹರಿ