ಹಾಗೇ ಸುಮ್ಮನೆ ನಿಂಗೊಂದು ಪತ್ರ...
ವಿಷಯಗಳೇ ಬೇಕೆಂದಿಲ್ಲವಲ್ಲ ನಿನ್ನೊಂದಿಗೆ ಸಂಭಾಷಣೆ ನಡೆಸಲು!!ಅದೆಷ್ಟೋ ಸಂಗತಿಗಳು ಪದದ ರೂಪಕ್ಕಿಳಿಯದೇ ಬರಿಯ ಕಂಗಳ ಹನಿಯಲ್ಲೇ ಮುಗಿದುಹೋಗಿವೆ.
ಅದೆಷ್ಟೋ ದಿನಗಳು ಮಾತು ಸತ್ತು ಹೋಗಿ ಬರಿಯ ಭಾವನೆಗಳಲ್ಲೇ ಬದುಕು ಕಂಡಿದ್ದೇವೆ.
ಪ್ರೀತಿ ಎಂಬ ಭಾವಕ್ಕೆ ಬಣ್ಣ,ರೂಪ,ಆಕಾರ ಕೊಡುವ ಶಕ್ತಿ ನನಗಿದ್ದಿದ್ದರೆ ನಿನ್ನದೇ ಇನ್ನೊಂದು ಪ್ರತಿಕೃತಿಯನ್ನು ಸೃಷ್ಟಿಸುತ್ತಿದ್ದೆನೇನೋ...;)
ಕಾರಣವಿಲ್ಲದೇ ಇಷ್ಟವಾಗುವ ವ್ಯಕ್ತಿತ್ವ ನಿನ್ನದು.
ಜಿನುಜಿನುಗಿಸುವ ಮಳೆಯಲ್ಲಿ ಹಾಡಾಗುತ್ತೀಯ,
ಬೆಳದಿಂಗಳ ಮೌನದಲ್ಲಿ ಮಾತಿಗಿಳಿಯುತ್ತೀಯ, ಕಾರ್ಗತ್ತಲ ರಾತ್ರಿಯಲ್ಲೆಲ್ಲೋ ದೀಪದಂತೆ ಕೈ ಹಿಡಿದು ನಡೆಸುತ್ತೀಯ!
ಹೇಗೆಂದು ವಿವರಿಸಲಿ ನಿನ್ನ ಜೊತೆಗಿರುವ ಮಧುರತೆಯ ಸವಿಯನ್ನು?
ಹಾಗೇ ಸುಮ್ಮನೆ ನಿನ್ನ ಜೊತೆ ಒಂದಷ್ಟು ದೂರ ನಡೆದರೆ ಸಾಕು ದಿವ್ಯ ಸಾಂಗತ್ಯದ ಅನುಭವ.
ನಿನ್ನ ಹೆಗಲಿಗೆ ತಲೆಯಾನಿಸಿಕೊಂಡು ಕೂತಾಗ ಮಾತುಗಳಿಗೆ ಆಸ್ಪದವಿಲ್ಲ.
ಬರಿಯ ಸ್ಪರ್ಶದಲ್ಲೇ 'ಬದುಕು ಕಟ್ಟಿಕೊಡುತ್ತೇನೆ ಹುಡುಗಿ' ಎಂಬ ಭರವಸೆಯನ್ನು ಅಂತರಾಳಕ್ಕೆ ಅರ್ಥ ಮಾಡಿಸುವ ಮಾಂತ್ರಿಕ ನೀನು.
ಅದ್ಯಾವ ಮಾಯೆಯಲ್ಲಿ ನನಗೆ ಜೊತೆಯಾದೆಯೋ ಆ ಭಗವಂತನಿಗೇ ಗೊತ್ತು!:)
ನಮ್ಮಿಬ್ಬರ ಸಂಬಂಧದಲ್ಲಿ ಒಂದಷ್ಟು ಸೊಗಸಿದೆ,
ಹುಸಿಕೋಪದ ಕಿರುನಗೆಯಿದೆ :*
ನಕ್ಷತ್ರಗಳ ಬೆಳಕಿದೆ ;)
ಅಪೂರ್ವವಾದದ್ದೊಂದು ಸೆಳೆತವಿದೆ :)
ಶುದ್ಧ ಗೆಳೆತನದ ಘಮವಿದೆ ಜೊತೆಗೆ ಹುಚ್ಚುತನಗಳ ಪರಮಾವಧಿಯಿದೆ :ಫ್
ನೀನು ಕೃಷ್ಣನಾದಾಗಲೆಲ್ಲ ನಾನು ರಾಧೆಯಾಯಾಗುತ್ತೇನೆ. ಆ ಸಂಭ್ರಮದಲ್ಲಿ ಮನಸ್ಸು ನವಿಲಾಗಿ ಗರಿಗೆದರುತ್ತದೆ:):):)
ಇವೆಲ್ಲದರ ನಡುವೆ ನಮ್ಮ ಪ್ರೀತಿ ಮುಂದುವರೆಯುತ್ತದೆ.
ಮಳೆಬಿಲ್ಲ೦ತೆ, ಕಣ್ಣೀರಂತೆ , ಮುದ್ದುಮಗುವ ನಗುವಿನಂತೆ...
ಕಡೆಗೆ ಕತ್ತಲೆಯಂತೆ, ಮತ್ತೆ ದಿವ್ಯ ಮೌನದಂತೆ . . .