ಭ್ರಾತೃ ಬಿದಿಗೆ :
ಭ್ರಾತೃ ಬಿದಿಗೆಯಂತೆ ಇಂದು!! ಯಮ ಧರ್ಮರಾಜ ತನ್ನ ತಂಗಿಯ ಮನೆಗೆ ಹೋಗಿ ಸಕಲಾದರಗಳನ್ನು ಸ್ವೀಕರಿಸಿ , ಹರಸಿ ಹಾರೈಸಿ ಬರುತ್ತಾನಂತೆ. ಅದೆಷ್ಟು ಚಂದವಲ್ಲವಾ ಸಂಪ್ರದಾಯಗಳು, ಹಬ್ಬಗಳು, ಅವುಗಳ ಹಿಂದಿನ ಕಥೆಗಳು :) ದೇವರಲ್ಲಿಯೂ ಮನುಷ್ಯತ್ವದ ಎಳೆ ಹುಡುಕಿ, ಅವರಲ್ಲಿನ ಸಂಬಂಧಗಳಿಗೂ ಬೆಲೆ ಕೊಟ್ಟು ಅದರ ಸುತ್ತೊಂದು ಕಥಾ ಹಂದರವ ಹೆಣೆದು ಸಂಸ್ಕೃತಿಯ ನೆಪದಲ್ಲಿ ನಮ್ಮೆದುರಿಡುವುದು ಅದ್ಭುತವೇ ಸೈ. ಧನುರ್ಧಾರಿ ದಾಶರಥಿಗಿಂತ ಸಂಸಾರಸಮೇತನಾಗಿ ನಿಂತ ಪ್ರೇಮಮೂರ್ತಿ ಶ್ರೀರಾಮಚಂದ್ರನೇ ಹೆಚ್ಚು ಆಪ್ತವಾಗುತ್ತಾನೆ ಎಂಬ ಹೆಚ್.ಎಸ್ ವೆಂಕಟೇಶಮೂರ್ತಿಯವರ ಮಾತುಗಳು ನೆನಪಾಗುತ್ತದೆ. ಯಮ ಇದ್ದಾನೋ ಇಲ್ಲವೋ ಎಂಬುದೇ ಗೊಂದಲವಾಗಿರುವಾಗ, ಆ ಯಮನಿಗೊಬ್ಬಳು ತಂಗಿ ಬೇರೆ!! ಪ್ರತೀ ಹಬ್ಬಕ್ಕೂ ತನ್ನದೇ ವೈಶಿಷ್ಟ್ಯ, ವಿಭಿನ್ನತೆ. ಆದರೆ ಅದರ ಹಿಂದಿರುವ ಹೂರಣವ ಗಮನಿಸಹೋದರೆ ಅಚ್ಚರಿಯಾಗುತ್ತದೆ. ಕೃಷಿ ಪ್ರಧಾನವಾದ ನಮ್ಮ ನಾಡಲ್ಲಿ ಕಾರ್ತಿಕವೆಂದರೆ ಒಂಥರಾ ವಿರಾಮದ ಸಮಯ. ಸುಗ್ಗಿಯಲ್ಲಿನ ಮೈಮುರಿಯುವ ಕೆಲಸವೆಲ್ಲಾ ಮುಗಿದು, ಅಡಿಕೆ ಕೊಯ್ಲಿಗೂ ಮುನ್ನ ಒಂದಿಷ್ಟು ವಿಶ್ರಾಂತಿ ಪಡೆಯೋ ಹೊತ್ತು. ಅಣ್ಣ ಎನಿಸಿಕೊಂಡವನಿಗೂ ಮದುವೆಯಾಗಿ ಗಂಡನ ಮನೆಯಲ್ಲಿರೋ ತಂಗಿಯ ನೆನಪಾಗುವುದರಲ್ಲಿ ತಪ್ಪೇನಿಲ್ಲ! ಇತ್ತ ತಂಗಿಯೂ ಬೇಗ ಕತ್ತಲಾಗೋ ನೆಪದಲ್ಲಿ ಮನೆಯ ಕೈಂಕರ್ಯಗಳನ್ನೆಲ್ಲಾ ಸರಸರನೆ ಮುಗಿಸಿ ತಂಪು ಸಂಜೆಯಲ್ಲಿ ತವರ ಕನವರಿಸೋ ಸಂದರ್ಭ. ದೀಪಾವಳಿಯ ಸಂಭ್ರಮ ಸಡಗರಗಳ ಜೊತೆಗೆ ತವರೂರಿಂದ ಅಣ್ಣನೂ ಬಂದರೆ ಖುಷಿಯ ಕಡೆಯ ಹಂತ ಅವಳಿಗೆ. ಅಮ್ಮನೋ-ಹೆಂಡತಿಯೋ ಬಲಿಪಾಡ್ಯಮಿಗೆಂದು ತಯಾರಿಸಿದ ಬಗೆ ಬಗೆಯ ಸಿಹಿ ತಿನಿಸುಗಳನ್ನೆಲ್ಲಾ ಕಟ್ಟಿಕೊಂಡು ತಂಗಿಯ ಮನೆಗೆ ಹೋಗುವ ಆನಂದ ಅಣ್ಣನಿಗೆ. ತಂಗಿಯ ಮನೆಯ ಸೌಭಾಗ್ಯವ ಅಣ್ಣ ಕಣ್ತುಂಬಿಕೊಳ್ಳಬೇಕು, ಅವಳ ನೋವುಗಳಿಗೊಂದಿಷ್ಟು ಸಾಂತ್ವನ ಹೇಳಬೇಕು ಜೊತೆ ಜೊತೆಗೇ ತಂಗಿಯ ಬೆಂಬಲಕ್ಕೆ ನಾವಿದ್ದೇವೆ ಎಂಬ ಸೂಕ್ಷ್ಮವ ಬೀಗರಿಗೆ ರವಾನಿಸಬೇಕು.. ಇತ್ತ ತಂಗಿಯೂ ಒಂದಿಷ್ಟು ಭಾವ ಕಳವಳಗಳ ಹೊರಹಾಕಬೇಕು, ತಾನು ಸುಖದಲ್ಲಿದ್ದೇನೆ ಎಂಬ ವಿಷಯವ ಅಣ್ಣನ ಮೂಲಕ ಅಪ್ಪ-ಅಮ್ಮನಿಗೆ ತಲುಪಿಸಬೇಕು ಹಾಗೆಯೇ ಗಂಡನ ಮನೆಯವರ ಮುಂದೆ ತನ್ನ ತವರಿನ ಸಿರಿಯ ಕೊಂಡಾಡಬೇಕು. ಅಣ್ಣನಿಗೆ ಏನಿಷ್ಟವೋ ಅದನ್ನೆಲ್ಲಾ ಕೈಯ್ಯಾರೆ ಮಾಡಿ ತನಗೆ ತೃಪ್ತಿಯಾಗುವವರೆಗೆ ಬಡಿಸಿ ಕೈತುಂಬಾ ದಕ್ಷಿಣೆ ನೀಡಿ ಸಂಭ್ರಮಿಸಬೇಕು. ಊಟದ ಮಧ್ಯ ತವರಿನ ಕಥೆಗಳ ಕೇಳಿ ಖುಶಿಸಬೇಕು! ಲಂಗ ದಾವಣಿಯುಟ್ಟು ತನ್ನ ಮುಂದೆಯೇ ಕುಣಿಯುತ್ತಿದ್ದ, ಮಾತು ಮಾತಿಗೂ ಮೂತಿ ದೊಡ್ಡ ಮಾಡಿ ಅಳುತ್ತಿದ್ದ ಹುಡುಗಿ ಸಂಸಾರದ ಭಾರವ ನಿಭಾಯಿಸುವ ಪರಿ ನೋಡಿ ಅಣ್ಣನಿಗೆ ಅಚ್ಚರಿಯಾದರೆ ; ಜಡೆ ಎಳೆದು ಕಾಟ ಕೊಡುತ್ತಿದ್ದ, ಸದಾ ಕಿತ್ತಾಡುತ್ತಿದ್ದ ಅಣ್ಣ ಜವಾಬ್ದಾರಿಯುತ ವ್ಯಕ್ತಿಯಾದ ಬಗೆಗಿಷ್ಟು ಬೆರಗು ತಂಗಿಯಲ್ಲಿ. ಕಡೆಗೆ ಮರಳುವಾಗ, ಅಣ್ಣ 'ಬೆಳೆದ ಮನೆಗೂ ಸೇರಿದ ಮನೆಗೂ ದೀಪವಾಗು ತಾಯಿ' ಎಂದು ಹರಸಿ ಹಾರೈಸುವಾಗ ಕಣ್ತುಂಬಿಕೊಳ್ಳುವ ಕ್ಷಣವನ್ನ ಪದಗಳಲ್ಲಿ ಹಿಡಿದಿಡಲು ಸಾಧ್ಯವಾ? ನಾಗರ ಪಂಚಮಿಗೆ ಭಂಡಾರ ಒಡೆಯಲು ಬಂದು ಹೋದ ಅಣ್ಣ ಮತ್ತೆ ಭ್ರಾತೃ ಬಿದಿಗೆಗೇ ಬರುವುದು. ಒಂದೊಂದು ಮಾಸಕ್ಕೆ ಒಂದೊಂದು ಕಾರಣ ಹುಡುಕಿ ತವರು ಮನೆಯ ಹಾದಿ ಕಾಯೋ ಹೆಣ್ಣಿನ ತಳಮಳಗಳು ಅವಳಿಗೆ ಮಾತ್ರ ಅರ್ಥವಾಗೋ ಸಂಗತಿ.
ಆಧುನಿಕತೆಯೇ ಮೈತಳೆದಂತಿರೋ ಈ ಘಳಿಗೆಯಲ್ಲಿ ವಾಟ್ಸಾಪ್ನಲ್ಲೋ, ಫೇಸ್ಬುಕ್ನಲ್ಲೋ 'ಹ್ಯಾಪಿ ಭ್ರಾತೃ ಬಿದಿಗೆ' ಅಂತಲೋ, 'ಮಿಸ್ಸಿಂಗ್ ಯೂ' ಅಂತಲೋ ಒಂದು ಪೋಸ್ಟ್ ಬರೆದು ಸುಮ್ಮನಾಗೋ ಜನಗಳ ಅಂತರಂಗವ ಹೊಕ್ಕು ನೋಡಬೇಕಿದೆ ಆ ಪ್ರೀತಿಯ ಭಾವ ಅರಿಯಲು. ಕಾಲಿಗೆ ಚಕ್ರ ಕಟ್ಟಿಕೊಂಡು ಓಡೋ ಈ ಯುಗದಲ್ಲಿ ಇಷ್ಟಾದರೂ ಮಾಡುತ್ತಾರಲ್ಲಾ ಎಂದು ಸಂಭ್ರಮಿಸಬೇಕೋ ಅಥವಾ ಬಂಧ-ಬಾಂಧವ್ಯಗಳ ಹುಡುಕುತ್ತಾ ಕೊರಗಬೇಕೋ ಎಂಬುದರ ನಡುವಿನ ಗೊಂದಲ ನನ್ನದು. ಕಾರಣಗಳೇನೇ ಇರಲಿ ಭ್ರಾತೃ ಬಿದಿಗೆಯಂದು ನಂಗಿಲ್ಲದ ಅಣ್ಣ ನೆನಪಾಗುತ್ತನೆಂಬುದಂತೂ ಸತ್ಯ. ಅಣ್ಣ-ತಮ್ಮಂದಿರಿಲ್ಲದೇ ಬೆಳೆದ ನಂಗೆ ಈ ಭಾವಗಳೆಲ್ಲಾ ತಿಳಿದಿಲ್ಲವಾದರೂ ಹೀಗಿದ್ದಿರಬಹುದು ಎಂದು ಕಲ್ಪನೆ ಮೂಡುವಂತೆ ಮಾಡಿದ್ದು ಅಣ್ಣ-ತಮ್ಮಂದಿರನ್ನು ಬೆಳಗ್ಗಿನಿಂದಲೂ ಕನವರಿಸುತ್ತಿದ್ದ ನಾನಿರುವ ಪಿ.ಜಿಯ ಮನೆಯೊಡತಿ.. ಅಣ್ಣ ಮಾತ್ರವಲ್ಲ ತಮ್ಮನೂ ಆಗಬಹುದು ಕಣೇ ಎಂದವರಂದರೂ ಯಾಕೋ ನಂಗ್ಯಾವತ್ತೂ ತಮ್ಮ ಇರಬೇಕೆಂಬ ಭಾವ ಕಾಡಿಲ್ಲವಾದ್ದರಿಂದ ಬರಹದ ತುಂಬೆಲ್ಲಾ ಅಣ್ಣನೇ ತುಂಬಿಕೊಳ್ಳುತ್ತಾ ಹೋದ..
ವಿಪರ್ಯಾಸವೆಂದರೆ ಹೊತ್ತುರಿಯುತ್ತಿರುವ ಘರ್ಷಣೆಗಳ ಪರಿಣಾಮವಾಗಿ ಈ ಬಾರಿಯ ಬಿದಿಗೆಗೆ ಯಮಧರ್ಮರಾಯನಿಗೂ ತಂಗಿಯ ಮನೆಗೆ ಹೋಗಲು ಸಾಧ್ಯವಾಗಲಿಲ್ಲವೇನೋ! ಧರ್ಮದ ದಳ್ಳುರಿಯಲ್ಲಿ ಬೇಯುತ್ತಿರುವ ಮನಸುಗಳಿಗೆಲ್ಲಾ ಬಿದಿಗೆಯ ಚಂದ್ರ ತಂಪು ನೀಡಲಿ. ವ್ಯಕ್ತಿಪೂಜೆಯ ಹೊರತಾಗಿ ವ್ಯಕ್ತಿತ್ವವನ್ನು ಆರಾಧಿಸೋ ವಿವೇಕ ಎಲ್ಲ ಗೌರವಾನ್ವಿತ ಘನತೆವೆತ್ತ ಜನಗಳಿಗೆ ಲಭಿಸಲಿ. ಯಾರ ಭಾವನೆಗಳಿಗೂ ನೋವುಂಟು ಮಾಡದೇ ಉತ್ಸವವಾಗಲೀ, ಜಯಂತಿಯಾಗಲಿ ಆಚರಿಸೋ ಪ್ರಜ್ನೆ ಸರ್ವರಿಗೂ ಮೂಡಲಿ ಎಂಬ ಸದಾಶಯದೊಂದಿಗೆ..
ಪ್ರೀತಿಯಿಂದ
ಲಹರಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ