ಬುಧವಾರ, ಡಿಸೆಂಬರ್ 6, 2017

ಬದುಕೆಂಬ ಮಾಯೆಯ ಸುತ್ತ ಸಾವು ಕಟ್ಟುವ ಕಥೆ

ಬದುಕ ಒಂದು ದಡದಲ್ಲಿ ನಿಂತು ನೋಡಿದರೆ ಸಾವೆಂಬುದು ಒಮ್ಮೆ ಆಚೆ ದಡದಲ್ಲಿ ನಿಂತು ಕೈಬೀಸುವ ಅಪರಿಚಿತ, ಮತ್ತೊಮ್ಮೆ ಬಗಲಿನಲ್ಲಿಯೇ ಮಾತಿಗೆ ಕೂರುವಷ್ಟು ಆತ್ಮೀಯ. ಒಮ್ಮೆ ಕಂಡವರಾರೂ ತಿರುಗಿ ಬಂದು ವಿವರಿಸುವ ಸಾಹಸ ಮಾಡಿಲ್ಲವಾದ್ದರಿಂದ, ಸಾವೆಂಬುದು ಬದುಕಿರುವ ಎಲ್ಲ ಜೀವಿಗಳಿಗೂ  ಕಣ್ಣೆದುರಿಗಿದ್ದೇ ಕಾಣದಂತಿರುವ ಅತ್ಯದ್ಭುತ ವಿಸ್ಮಯ.  

ಬದುಕೆಂಬ ಮಾಯೆಯ ಸುತ್ತ ಸಾವು ಕಟ್ಟುವ ಕಥೆಯನ್ನು ರಂಗರೂಪವಾಗಿಸಿದರೆ ’ಮಹಾಮಾಯಿ’ ಪ್ರತ್ಯಕ್ಷಳಾಗುತ್ತಾಳೆ. ಊರಿನ ಜನರು ಅವಳಿಗಿಟ್ಟ ಹೆಸರು ’ಶೆಟವಿ ದೇವಿ’. ಸಾವಿನ ಅಧಿದೇವತೆ ಅವಳು.. ಸಂಜೀವಶಿವನೆಂಬ ಸಾಕು ಮಗ, ಗಿರಿಮಲ್ಲಿಗೆಯೆಂಬ ಸಹಾಯಕಿ. ಸಾವಿನ ತಾಯಿಯ ಮಗ ಜೀವ ಉಳಿಸುವ ವೈದ್ಯ! ಈ ವಿರೋಧಾಭಾಸವೇ ನಾಟಕದ ಮೂಲಧಾತು. ಸಂಜೀವಶಿವ ಒಮ್ಮೆ ನಾಡಿ ನೋಡಿದನೆಂದರೆ ಖಾಯಿಲೆ ಗುಣಮುಖವಾದಂತೆಯೇ ಲೆಕ್ಕ.. ಆದರೆ ಅವನು ನಾಡಿ ನೋಡುವುದಕ್ಕೆ ತಾಯಿಯ ಅಪ್ಪಣೆಯಾಗಬೇಕು. ಈ ಅಪ್ಪಣೆ ದೊರೆತ ನಂತರವೇ ವೈದ್ಯ ಮಾಡುವ ಪ್ರಕಿಯೆ ಸಂಜೀವಶಿವನಿಗೆ ವರವೂ ಹೌದು ಅಂತೆಯೇ ಸಂಕೋಲೆಯೇ ಹೌದು.. ಸ್ವಾತಂತ್ರ್ಯವೆಂಬ ಬದುಕನ್ನು, ಸಾವೆಂಬ ಸಂಕೋಲೆ ಇಂಚಿಂಚಾಗಿ ಆವರಿಸುವಾಗ ಚಡಪಡಿಸುವ ಸಂಜೀವಶಿವನ ಮನಸ್ಸು ಚಿನ್ನದ ಪಂಜರದೊಳಗಿನ ಹಸಿರು ಗಿಳಿ.. 
’ಬಂದೇ ಬರುತ್ತದೆಂದು ಗೊತ್ತಿರುವ ಸಾವನ್ನು ಕಾಯುವ ಶಿಕ್ಷೆ ಯಾರಿಗೂ ಬರಕೂಡದು’ ಎಂಬ ಪುಷ್ಪಗಂಧಿಯ ಆಳದ ಮಾತುಗಳು ಬದುಕಿನ ಕಟ್ಟಕಡೆಯ ತೀರದಲ್ಲಿ ನಿಂತಿರುವ ರಾಜಕುಮಾರಿ ಇರುವಂತಿಗೆಯ ಸ್ಥಿತಿಯನ್ನು ಒಂದೇ ವಾಕ್ಯದಲ್ಲಿ ವಿವರಿಸುತ್ತದೆ. ಜೀವನಪ್ರೀತಿಯನ್ನೆಲ್ಲಾ ತನ್ನೆದೆಗೇ ಬಸಿದುಕೊಂಡು , ಬದುಕಬೇಕೆಂಬ ತೀವ್ರ ಹಂಬಲವಿದ್ದಾಗಿಯೂ ; ಸಾವಿನ ನಾವೆಯನ್ನೇರುವ ಪಾರಿಜಾತದಂಥಾ ಹುಡುಗಿ ರಾಜಕುಮಾರಿ ಇರುವಂತಿಗೆ.  ಯಾವುದೋ ಮುಗ್ಧತೆಯ ಸೆಳವಿಗೆ ಒಳಗಾಗಿ ಸಾವಿನ ಗುಹೆಯೊಳಗೆ ನಡೆದುಬಿಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವೈದ್ಯ ಸಂಜೀವಶಿವನನ್ನು ಎದುರುಗೊಳ್ಳುತ್ತಾಳೆ. ಅದು ಬಿಡುಗಡೆಯ ಮೊದಲ ಹಂತ. ತಾಯಿಯ ಅಪ್ಪಣೆಗೆ ವಿರುದ್ಢವಾಗಿ ಇರುವಂತಿಗೆಯ ನಾಡಿ ಮಿಡಿತಕ್ಕೆ ಸ್ಪಂದಿಸುವ ಸಂಜೀವಶಿವ ಹಾಗೂ ಜೀವನೋತ್ಸಾಹವನ್ನು ಮರಳಿಪಡೆದು ಪ್ರೀತಿಯ ಮಾಯೆಗೆ ಸಿಲುಕುವ ರಾಜಕುಮಾರಿ. 
  ನಂತರದ್ದೆಲ್ಲಾ ಪ್ರೀತಿಯನ್ನು ಉಳಿಸಿಕೊಳ್ಳಲು ಸಾವಿನ ವಿರುದ್ಧ ಸೆಣಸಾಟಕ್ಕೆ ನಿಲ್ಲುವ ಸಂಜೀವಶಿವನ ಆತ್ಮಸ್ಥೈರ್ಯ ಹಾಗೂ ಇಚ್ಛಾಶಕ್ತಿಯ ವಿವರ ಸಂಕಲನ. ಸಂಜೀವಶಿವ ನಮ್ಮೆಲ್ಲರ ಪ್ರತಿರೂಪವಾಗಿ ಕಣ್ಣೆದುರಿಗೆ ನಿಲ್ಲುತ್ತಾನೆ. ಹೆಜ್ಜೆ ಹೆಜ್ಜೆಗೂ ತಾಯಿಯೆಂಬ ಮೋಹದೊಂದಿಗೆ, ಸಾವೆಂಬ ಮಾಯೆಯೊಂದಿಗೆ, ಅಧಿಕಾರವೆಂಬ ಬಲಿಷ್ಠ ಕೋಟೆಯೊಂದಿಗೆ ನಡೆಯುವ ಅವನ ಘರ್ಷಣೆಗಳು ತಿಳಿದೋ ತಿಳಿಯದೆಯೋ ನಮ್ಮ ಮನಸ್ಸಿನಲ್ಲೊಂದು ಕೋಲಾಹಲವನ್ನೆಬ್ಬಿಸುತ್ತವೆ. ಪ್ರೀತಿಗಾಗಿ, ಸ್ವಾತಂತ್ರ್ಯಕ್ಕಾಗಿ, ಸ್ವ ಇಚ್ಛೆಗಾಗಿ, ಸ್ವಾಭಿಮಾನಕ್ಕಾಗಿ ತುಡಿಯುವ ಅವನ ರೀತಿ ನಮ್ಮದೂ ಆಗಿಹೋಗುತ್ತದೆ.ಮೊದಲೆಲ್ಲೋ ಪೇಲವ ಎನಿಸುತ್ತಿದ್ದ ಅವನ ವ್ಯಕ್ತಿತ್ವ ನಾಟಕ ಮುಗಿಯುವ ಹೊತ್ತಿಗೆ ಪೂರ್ಣ ಪಾತ್ರವಾಗಿ ನಾಟುತ್ತದೆ. 
ಸಂಜೀವಶಿವನೊಡನೆ ಸೆಣಸುವ, ಪೆಟ್ಟಿಗೆ ಪ್ರತಿ ಪೆಟ್ಟು ನೀಡುವ, ಪದೇ ಪದೇ ಅವನ ಸಂಕಲ್ಪಕ್ಕೆ ಕಲ್ಲೆಸೆಯುವ ಶಕ್ತಿ ಮಹಾಮಾಯಿ! ಆ ಮಾಯೆ ಸಾವೋ, ನಮ್ಮೊಳಗಿನ ಅಂಧಕಾರವೋ, ಒಳಗೆ ಸುಪ್ತವಾಗಿರುವ ಅಹಂಕಾರವೋ ಅಥವಾ ನಮ್ಮೊಳಗಿನ ಸಾಮರ್ಥ್ಯವನ್ನು ಹೊರತರುವ ಸಲುವಾಗಿ ಕಣ್ಣೆದುರು ನಿಲ್ಲುವ ಪ್ರಬಲ ರೂಪವೋ ಎಂಬ ಗೊಂದಲ ಈ ಕ್ಷಣಕ್ಕೂ ಉಳಿದುಹೋಗಿದೆ. ಅವಳ ಭೀಕರ ರೂಪ, ಭಾವನೆಯೇ ಇಲ್ಲದಂತೆ ವರ್ತಿಸುವ , ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುವ ಅವಳದೇ ಅಂಶ , ಎಲ್ಲದರಾಚೆಗೆ ತಾಯಿಯೆಂಬ ಮಮತೆಯನ್ನು ಎದೆಯಾಳದಲ್ಲಿ ಬಚ್ಚಿಟ್ಟುಕೊಂಡಿರುವಂತೆ ಭಾಸವಾಗಿಸುವ ಮಹಾಮಾಯಿ ನಾಟಕ ಮುಗಿದ ಎಷ್ಟೋ ಹೊತ್ತಿನ ನಂತರ ಒಳಗಿನ ಯಾವುದೋ ಬಾಗಿಲು ದಾಟಿ ಹೊರನಡೆಯುತ್ತಾಳೆ. ಅವಳು ಹೊರನಡೆದ ಮೇಲೆಯೇ ಒಳಗಿದ್ದದ್ದು ಬರಿದೆ ಮಾಯೆ ಎಂಬ ಸತ್ಯ ಗೋಚರವಾಗುತ್ತದೆ. 
ಈ ಸಂಘರ್ಷಗಳ ನಡುವೆ ನಡೆಯುವ ಬದುಕ ಅಷ್ಟೇನೂ ಕಷ್ಟವಲ್ಲ ಎಂಬುದಕ್ಕೆ ಸುತ್ತಲಿನ ಪಾತ್ರಗಳು ಮೂಡಿಸುವ ಹಾಸ್ಯದ ತೆಳು ಅಲೆಯೇ ಸಾಕ್ಷಿ. ಪ್ರತಿ ಪಾತ್ರವೂ ಬದುಕ ಒಂದೊಂದು ಹಂತವನ್ನು ಪ್ರತಿಬಿಂಬಿಸುವಲ್ಲಿ ಗೆಲ್ಲುತ್ತದೆ ಹಾಗೂ ತನ್ಮೂಲಕ ನಾಟಕವನ್ನೂ ಗೆಲ್ಲಿಸುತ್ತದೆ. ಆ ನೆರಳು ಬೆಳಕಿನಾಟ, ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಬದಲಾಗೋ ಬಣ್ಣಬಣ್ಣದ ಚಿತ್ರಣ,ರಂಗತಂತ್ರ,ಪಾತ್ರಕ್ಕೆ ತಕ್ಕಂತೆ ಭೀಕರ, ಸಾತ್ವಿಕ, ಸಮಾಧಾನವೆನಿಸೋ ವಸ್ತ್ರ ಹಾಗೂ ಪ್ರಸಾಧನ ಪರಿಪೂರ್ಣತೆಯ ಹಾದಿಯಲ್ಲಿ ನಾಟಕವನ್ನು ಕೊಂಡೊಯ್ಯುತ್ತದೆ. ಪಾತ್ರಗಳು ಹಾಗೂ ಪಾತ್ರಧಾರಿಗಳು ನೋಡುಗರನ್ನು ರಂಗಲೋಕಕ್ಕೆ ಕೈ ಹಿಡಿದು ಕರೆದುಕೊಂಡು ಹೋಗುತ್ತಾರೆ.
ಒಟ್ಟಾರೆಯಾಗಿ ’ಮಹಾಮಾಯಿ’ ತಂಡ ಒಂದು ಅದ್ಭುತ ರಂಗಸಂಜೆಯನ್ನು, ರಂಗಾನುಭವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ :) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ