ಬುಧವಾರ, ಡಿಸೆಂಬರ್ 6, 2017

'ದೇವರಮನೆ' ಎಂಬ ಊರು ನನ್ನೊಳಗೆ ಇಳಿದು ಹೋದ ಕಥೆ

ಇದ್ದಕ್ಕಿದ್ದಂತೇ ಗೆಳೆಯ ಕರೆ ಮಾಡಿ 'ನಾಳೆ ಕೆಲಸನೆಲ್ಲಾ ಬದಿಗಿಟ್ಟು ಫ್ರೀ ಆಗಿರೇ.. ಎಲ್ಲಿಗೋ ಹೋಗಲಿಕ್ಕಿದೆ' ಎಂದಿದ್ದ. 'ಎಲ್ಲಿಗೆ', 'ಯಾಕೆ', 'ಎಷ್ಟೊತ್ತಿಗೆ', 'ಹೇಗೆ',  'ಯಾರ್ಯಾರು' ಹೀಗೆ ನೂರೆಂಟಿದ್ದ ನನ್ನ ಪ್ರಶ್ನೆಗಳಲ್ಲಿ ಯಾವುದಕ್ಕೂ ಉತ್ತರಿಸದೆ ನಾಪತ್ತೆಯಾಗಿದ್ದ. ತಲೆಯೊಳಗೆ ಹುಳ ಬಿಟ್ಟುಕೊಂಡು ಇಡೀ ದಿನ ಬೆಕ್ಕಿನಂತೆ ಶತಪಥ ತಿರುಗಿದ್ದೆ ನಾ. ಅದೆಷ್ಟು ಗೋಗರೆದರೂ ಸ್ಥಳ ಯಾವುದೆಂದು ಸುಳಿಹೂ ಕೊಡಲಿಲ್ಲ ಆ ಪುಣ್ಯಾತ್ಮ. ಫೋಟೋಗ್ರಫಿಯ ನೆಪದಲ್ಲಿ ಅವನು ಊರು ಸುತ್ತುತ್ತಿದ್ದರೆ, ಬೆನ್ನು ಹತ್ತಿದ ಬೇತಾಳದಂತೆ ನಾನೂ ಅವನ ಬಾಲ ಹಿಡಿದು ಹೋಗುತ್ತಿದ್ದೆ! 'ಇರ್ರಿಟೇಟ್ ಮಾಡ್ಬೇಡ ನಂಗೆ.. ನಿನ್ನ ಎಲ್ಲಾ ಕಡೆನೂ ಕರ್ಕೊಂಡ್ ಹೋಗೋಕೆ ಸಾಧ್ಯ ಆಗಲ್ಲ' ಎಂದು ಬೈದು ನನ್ನ ಬಿಟ್ಟು ಹೋಗುತ್ತಿದ್ದುದೇ ಹೆಚ್ಚು. ಇವತ್ಯಾಕೋ ಅವನೇ ಸಿದ್ಧನಾಗಿರು ಎಂದಿದ್ದು ಚಕಿತಳನ್ನಾಗಿ ಮಾಡಿತ್ತು ನನ್ನ. ಯಾವ ಸ್ಥಳ ಎಂಬ ಸುಳಿವೇ ಇಲ್ಲದೆ ಸುಮ್ಮನೆ ತಯಾರಾಗಿ ನಿಂತಿದ್ದೆ ನಾ. ಮತ್ತೆ ಪಯಣ ಸಾಗಿದ್ದು ಮೂಡಿಗೆರೆಯ ರಸ್ತೆಯಲ್ಲಿ. 'ದೇವರಮನೆಗಾ!!??' ಎಂಬ ಉದ್ಗಾರ ಹೊಮ್ಮಿತ್ತು ನನ್ನಿಂದ.
      ವರ್ಷದ ಹಿಂದೆ ಮೂಡಿದ್ದ ಕನಸು "ದೇವರಮನೆ".  ಹೆಸರೇ ಎಲ್ಲಕ್ಕಿಂತಲೂ ಹೆಚ್ಚು ಆಕರ್ಷಿಸಿತ್ತು. ಜಾನಪದ ಕಥೆಯೊಂದರ ಪ್ರಕಾರ ಶಿವ ತನ್ನ ಬಸವನನ್ನು ಭೂಲೋಕದ ಜನರ ಯೋಗಕ್ಷೇಮ ವಿಚಾರಿಸಲು ಕಳುಹುತ್ತಾನೆ. ಜನರು ಸಂಕಷ್ಟದಿಂದ ನರಳುತ್ತಿದ್ದರೂ ಬಸವ ಎಲ್ಲರೂ ಸುಕ್ಷೇಮದಿಂದಿದ್ದಾರೆ ಎಂಬುದಾಗಿ ಸುಳ್ಳು ಹೇಳುತ್ತದೆ. ಸತ್ಯಾಂಶ ತಿಳಿದ ಪರಶಿವನು ನೀನು ಜನಗಳ ಸೇವೆ ಮಾಡುತ್ತಾ ಅವರ ಬಡತನವನ್ನು ನಿವಾರಿಸು ಎಂದು ಶಾಪವನ್ನು ನೀಡುತ್ತಾನೆ. ಹೀಗೆ ಭೂಮಿಗೆ ಬಂದ ಬಸವನ ಹಿಂದೆ ಭಗವಂತನೂ ಕಾಲಭೈರವನಾಗಿ ಬಂದು 'ದೇವರಮನೆ'ಯಲ್ಲಿ ನೆಲೆ ನಿಲ್ಲುತ್ತಾನೆ. ಹೀಗೆ ಕಥೆಯ ಗುಂಗು ಹಿಡಿದು, ಜೊತೆಗೆ ಅಲ್ಲಿಷ್ಟು ಕಾಡಿದೆ ಎಂಬ ವಿಷಯ ತಿಳಿದು ದೇವರಮನೆಗೆ ಹೋಗುವ ಇರಾದೆಯನ್ನು ವ್ಯಕ್ತಪಡಿಸಿದ್ದೆ. ಪ್ರಾಜೆಕ್ಟ್, ಪೇಪರ್ ಪ್ರೆಸೆಂಟೇಶನ್ ಎಂಬ ಹುಚ್ಚು ಹಿಡಿದು ತಲೆ ರೋಷ ಹಿಡಿಸಿಕೊಂಡಿದ್ದ ನನ್ನ ಅಲ್ಲಿಗೆ ಕರೆದೊಯ್ಯುವ ಮನಸು ಮಾಡಿದ್ದ ಗೆಳೆಯ! ಮೂಡಿಗೆರೆಯಿಂದ ಕಳಸದ ರಸ್ತೆಯಲ್ಲಿ ಸಾಗಿ, ಬಲಕ್ಕೆ ತಿರುಗಿದರೆ ದೇವರಮನೆಗೆ ಸುಮಾರು 20ಕಿ.ಮೀ ನ ಹಾದಿ. ಹಾವು ಕವಲಿನ ದಾರಿಯಾದರೂ , ಗುಂಡಿ-ಹಳ್ಳಗಳಿಲ್ಲವಾದ್ದರಿಂದ ಪ್ರಯಾಣ ಆಯಾಸವೆನಿಸುವುದಿಲ್ಲ. ದಾರಿಯ ಇಕ್ಕೆಲಗಳಲ್ಲಿ ಕಾಫಿ ಎಸ್ಟೇಟ್, ಕಿ.ಮೀ ಗಟ್ಟಲೆ ದೂರವಿರೋ ಮನೆಗಳು, ಮಧ್ಯೆ-ಮಧ್ಯೆ ತಲೆದೋರೋ ಜಾನವಾರುಗಳು. ದಾರಿಯೊಂದಿಷ್ಟು ಗೊಂದಲವಾಗಿ 'ದೇವರಮನೆ' ತಲುಪುವ ಹೊತ್ತಿಗೆ ಸಮಯ ಮಧ್ಯಾಹ್ನ ಮೂರಾಗಿತ್ತು.
ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಂಗೊಳಿಸೋ ಪರ್ವತಗಳ ಶ್ರೇಣಿ. ಸುತ್ತ ತಲೆಯೆತ್ತಿ ನಿಂತಿರೋ ಗಿರಿಗಳ ನಡುವೆ ಸುಶೋಭಿಸುತ್ತಿದ್ದಾನೆ ಕಾಲಭೈರವನಾದ ಗಿರಿಜಾವಲ್ಲಭ. ಕಲ್ಲು ಕಡೆದು ನಿರ್ಮಿಸಿರೋ ಶಿವನ ಆಲಯ ಹೆಚ್ಚೇನೂ ಅಲಂಕಾರವಿಲ್ಲದೇ, ನಿರಾಭರಣ ಸುಂದರಿಯಂತೆ ಆಕರ್ಷಿಸುತ್ತದೆ. ದೇವಸ್ಥಾನದ ಎದುರಿನಲ್ಲಿಯೇ ದೊಡ್ಡದೊಂದು ಕೆರೆ. ಕೆರೆಯ ಮಧ್ಯಭಾಗದಲ್ಲಿ ಕಲ್ಲಿನಿಂದ ನಿರ್ಮಿಸಿರೋ ಕಲ್ಯಾಣಿ. ಅಭಿಷೇಕ ಪ್ರಿಯನಾದ ಈಶ್ವರನಿಗೆ ಈ ಕಲ್ಯಾಣಿಯಿಂದಲೇ ನಿತ್ಯ ಜಲ ಪೂರೈಕೆ. ದೇವಾಲಯದ ಹಿಂಭಾಗದಲ್ಲಿ ಬಿಮ್ಮನೆ ಹರಡಿರೋ ಬೆಟ್ಟ-ಗುಡ್ಡಗಳ ಸಾಲು.
    ಏರುತ್ತಾ ಹೋದಂತೆಲ್ಲಾ ಏರಿಸಿಕೊಳ್ಳುತ್ತಾ ಹೋಗುತ್ತವೆ ಈ ಬೆಟ್ಟಗಳು. ವಿದ್ಯುತ್ ತಂತಿಗಳು ಹಾಯ್ದುಹೋಗಿರುವ ಕಡೆ ನಡೆದರೆ ಕಿವಿಯೊಳಗೆ ಗುಯ್ ಗುಟ್ಟುವ ಸದ್ದು ಮಾರ್ದನಿಸುತ್ತದೆ. ಮೋಡಗಳು ಮುತ್ತಿಡುವಷ್ಟು ಹತ್ತಿರವಲ್ಲದಿದ್ದರೂ; ಕೈ ತಾಕುವಷ್ಟು ಸನಿಹ :)  ಈ ಬೆಟ್ಟದಿಂದ ಆ ಬೆಟ್ಟಕ್ಕೆ, ಅದರಿಂದ ಮತ್ತೊಂದಕ್ಕೆ ಕುಣಿದುಕೊಂಡು ಸಾಗಬಹುದು. ತುತ್ತತುದಿಯಲ್ಲಿ ದೊರಕುವ ನೀರವತೆ, ನಿರ್ಲಿಪ್ತತೆ ವಿವರಣೆಗೆ ನಿಲುಕದ್ದು. ಆ ಮೌನ ಅದಮ್ಯ ಹಾಗೂ ಅಗೋಚರ! ಈ ಬೆಟ್ಟಗಳಲ್ಲೆಲ್ಲೂ ಧೀಮಂತವೆನಿಸೋ ಮರಗಳಿಲ್ಲ. ತೇಗ, ಬೀಟೆ, ಸಾಗುವಾನಿ ಯಾವುದರ ಸುಳಿವೂ ಇಲ್ಲ! ಕುರುಚಲು ಪೊದೆ, ಕೈ-ಕಾಲಿಗೆ ಅಡರೋ ಮುಳ್ಳುಗಳ ಹೊರತು ಮತ್ತೇನೂ ಕಾಣ ಸಿಗದು. ಸರ್ವವ್ಯಾಪಿ ಶಂಕರನ ಪ್ರತಿರೂಪವಾದಂತೆ ಕಂಡವು ಈ ಬೆಟ್ಟಗಳು. ಬೆಟ್ಟವಾದರೇನು, ಬಯಲಾದರೇನು; ಪ್ರೀತಿ ಹಬ್ಬಿ ನಕ್ಕರಾಯಿತು ಎಂದು ಇಳಿದುಬಂದಿದ್ದೆ.
        ಈ ಸ್ಥಳದ ಸುತ್ತ ಹೆಚ್ಚೆಂದರೆ ನಾಲ್ಕೈದು ಮನೆಗಳಷ್ಟೇ ಇರುವುದು. ಸ್ಥಳೀಯರ ಪ್ರಕಾರ ಹೊಯ್ಸಳರ ರಾಜ ಈ ದೇವಸ್ಥಾನವನ್ನು ನಿರ್ಮಿಸಿದನಂತೆ.  1200 ವರ್ಷಗಳ ಇತಿಹಾಸವಿರೋ ದೇವರಮನೆ ಒಮ್ಮೊಮ್ಮೆ ವಿಸ್ಮಯವೆನಿಸಿದರೆ ಮತ್ತೊಮ್ಮೆ ನಿರ್ಲಿಪ್ತವೆನಿಸುತ್ತದೆ. ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ದಿನಕ್ಕೆ ಸರಿಸುಮಾರು 30 ರಿಂದ 35 ಜನರು 'ದೇವರಮನೆ'ಗೆ ಭೇಟಿ ನೀಡುತ್ತಾರೆ. ಹಲವಾರು ಧಾರಾವಾಹಿಗಳು ಮತ್ತು ಸಿನಿಮಾಗಳೂ ಇಲ್ಲಿ ಚಿತ್ರೀಕರಣಗೊಂಡಿವೆ. 'ಅದ್ಯಾವುದೋ ಸಿನಿಮಾದೋರು ಇಲ್ಲಿ ಜಾತ್ರೆ ಮಾಡಿದ್ರು ಸಾರ್.. ಅವ್ರು ಹಚ್ಚಿರೋ ಬಣ್ಣ ಎಲ್ಲಾ ಹಂಗೇ ಇದೆ ನೋಡಿ ಸಾರ್.. ಎಲ್ಲಾ ಕ್ಲೀನ್ ಮಾಡಿ ಅಂದ್ರೂ ಬಿಟ್ಟೋಗಿದಾರೆ ' ಎನ್ನುತ್ತಿದ್ದ ಸ್ಥಳೀಯನ ಮಾತಿನಲ್ಲಿ ನೋವಿನ ಛಾಯೆ ಎದ್ದು ಕಾಣುತ್ತಿತ್ತು. ಅದ್ಯಾಕೋ ಬೆಟ್ಟದ ಮೇಲೆ ಕಂಡ ಬೀರ್ ಬಾಟಲ್ ಗಳು , ಸಿಗರೇಟ್ ತುಂಡುಗಳು ಫಕ್ಕನೆ ನೆನಪಾದವು. ಕಾಲಭೈರವನೇ ಇವರಿಗೆಲ್ಲಾ ಬುದ್ಧಿ ದಯಪಾಲಿಸು ಎಂಬುದೊಂದು ಪ್ರಾರ್ಥನೆಯ ಸಲ್ಲಿಸಿ ಗೋಧೂಳಿ ಮುಹೂರ್ತದಲ್ಲಿ ಮರಳಿ ಹೊರಟ ನಮ್ಮನ್ನು ದಾರಿಯುದ್ದಕ್ಕೂ ಅಸ್ತಂಗತನಾಗುತ್ತಿದ್ದ ಸೂರ್ಯ ಕಾಡುತ್ತಿದ್ದ. 'ದೇವರಮನೆ' ಎಂಬ ಊರು ನನ್ನೊಳಗೆ ಇಳಿದು ಹೋದ ಕಥೆ ಮನದಲ್ಲಿ ರೂಪುಗೊಳ್ಳುತ್ತಿತ್ತು.. :) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ