ಸೋಮವಾರ, ಮಾರ್ಚ್ 7, 2016

ಮಹಾದೇವನೊಳಗೊಬ್ಬ ಮಾನವ.. :)

ಮನುಷ್ಯರಲ್ಲಿ ದೈವವ ಹುಡುಕೋದಕ್ಕಿಂತ ದೇವರಲ್ಲಿ ಮಾನುಷ ಛಾಯೆಯ ಹುಡುಕೋದೆ ಜಾಸ್ತಿ ನಾನು! ದೇವರಿಗೂ ಮನಸ್ಸಿದ್ದೀತಲ್ವಾ, ಶಾಪ-ವರಗಳ ಹೊರತಾಗಿಯೂ ಭಗವಂತನಿಗೊಂದು ಬದುಕಿದ್ದೀತಲ್ವಾ ಅಂತೆಲ್ಲಾ ಯೋಚಿಸುವಾಗ ವಿಷ್ಣು ವಾಸ್ತವಕ್ಕೆ ದೂರ ಎನ್ನಿಸಿ ಶಿವ ಆಪ್ತನೆನಿಸುತ್ತಾನೆ. ಬೇಸರವೆನಿಸೋ ಸಂಜೆಗಳಲ್ಲೆಲ್ಲಾ ರಾಗವೊಂದನ್ನು ಹುಡುಕಿ ಮೋಹಕತೆಯೊಂದಿಗೆ ಬಳಿ ಬರೋ ಗೆಳೆಯ ಕೃಷ್ಣನಾಗುತ್ತಾನೆ ; ಸದಾ ಜೊತೆಗಿದ್ದು ಕಷ್ಟಕ್ಕೆ ಹೆಗಲು ಕೊಡೋ ಬಂಧು ಶಂಕರನಾಗುತ್ತಾನೆ :) 

ಹರನೆಂದರೆ ನನ್ನ ಪಾಲಿಗೆ ಕೋಪಿಷ್ಠ ತಂದೆ , ಪತ್ನಿಯನ್ನು ಅತಿಯಾಗಿ ಪ್ರೀತಿಸೋ ಆದರ್ಶ ಪತಿ , ಪ್ರಿಯತಮೆಯನ್ನು ತಲೆಯ ಮೇಲೆ ಹೊತ್ತು ತಿರುಗುವ ಭಾವುಕ ಪ್ರೇಮಿ,  ತನ್ನ ಬಂಧು-ಬಾಂಧವರ ಒಳಿತಿಗಾಗಿ ವಿಷವನ್ನೂ ಲೆಕ್ಕಿಸದೆ ಕುಡಿದ ಅದ್ಭುತ ಮನಸ್ಸಿನ ವ್ಯಕ್ತಿ , ಕಲ್ಮಶ ಬೆರೆಸದೆ ಕೇಳಿದ ಪ್ರತೀ ಆಸೆಯನ್ನೂ ನಿಮಿಷಾರ್ಧದಲ್ಲಿ ಪೂರೈಸೋ ಭೋಳೇಶಂಕರ <3 ಕಣ್ಣುಗಳಲ್ಲಿ ಕಮಲದ ಹೊಂಬೆಳಕ ಬದಲಾಗಿ ಬೆಂಕಿಯ ಕಿರಣಗಳಿವೆ ಆದ್ದರಿಂದಲೇ ಇವನು ಫಾಲನೇತ್ರ.. ತಲೆಗೊಂದು ಕಿರೀಟ, ಕೈಗೊಂದು ತೋಳಬಂಧಿ, ಸೊಂಟಕ್ಕೊಂದು ಪಟ್ಟಿ , ಬಣ್ಣ ಬಣ್ಣದ ಜರತಾರಿ , ರೇಷಿಮೆ ಪಂಚೆ; ಊಹೂಂ.. ಇದ್ಯಾವುದೂ ಸಲ್ಲ ಇವನಿಗೆ! ಬೇಕಾದಹಾಗೆ ಕೂದಲು ಬಿಟ್ಟು, ಅರ್ಧ ಚಂದ್ರನನ್ನು ಸಿಗಿಸಿಕೊಂಡು, ಇಷ್ಟವಾದ ಹಾಗೆ ಬದುಕೋ ಇವನು ಜಟಾಜೂಟಾಧಾರಿ.. ರಾಜವೈಭೋಗಗಳು ಬೇಕಿಲ್ಲದ, ಅರಮನೆಯ ಅಗತ್ಯವಿಲ್ಲದ ಇವನು ಸ್ಮಶಾನವಾಸಿ.. ಅದೆಷ್ಟು ಸರಳ ಶಿವನ ಬದುಕು :) ಪ್ರೀತಿಯ ಮಡದಿ, ಮುತ್ತಿನಂಥಾ ಮಕ್ಕಳು, ಹೆಗಲಿಗೆ ಹೆಗಲು ನೀಡೋ ನಂದಿ-ಭೃಂಗಿಯಂಥಾ ಸ್ನೇಹಿತರು! 'ನಮ್ಮ ಸಂಸಾರ- ಆನಂದ ಸಾಗರ' ಅನ್ನೋ ಸಾಲುಗಳು ಗಿರಿಜಾವಲ್ಲಭನನ್ನು ನೋಡಿಯೇ ಬರೆದಿರಬೇಕು ಅನ್ನೋ ಅನುಮಾನ ಆಗಾಗ ಸುಳಿದುಹೋಗಿದ್ದಿದೆ ನನ್ನಲ್ಲಿ.. 

ಅದೆಂತಹ ಅನುರೂಪದ ದಾಂಪತ್ಯ ದಾಕ್ಷಾಯಿಣಿ ಹಾಗೂ ಶಂಕರನದ್ದು! ತುಂಬು ಗರ್ಭಿಣಿಯನ್ನು ಯಾರದೋ ಮಾತು ಕೇಳಿ ಕಾಡಿಗಟ್ಟಿದ ರಾಮನಿಗಿಂತ, ಸತಿಯ ವಿರಹ ತಾಳಲಾರದೆ ಅಖಂಡ ತಪಸ್ಸಿಗೆ ಕುಳಿತ ಶಿವ ಇಷ್ಟವಾಗುತ್ತಾನೆ. ಬದುಕಲ್ಲಿ ಕಷ್ಟ- ಸುಖಗಳನ್ನು ಹಂಚಿಕೊಳ್ಳುವುದು ಎಲ್ಲರಿಗೂ ತಿಳಿದ ವಿಷಯವೇ ಆದರೆ ದೇಹದಲ್ಲೂ ಅರ್ಧಪಾಲನ್ನು ನೀಡಿ ಅರ್ಧನಾರೀಶ್ವರನಾದ ಉಮಾಪತಿ ಸೋಜಿಗವೆನಿಸುತ್ತಾನೆ. ಕೋಪದ ಪರಾಕಾಷ್ಠೆಯ ತಲುಪಿ ರುದ್ರನರ್ತನ ಮಾಡೋ ಕಾಲಭೈರವ, ಪ್ರೀತಿ-ಭಕ್ತಿಗೆ ಕರಗಿ ಸೌಮ್ಯ ಸ್ವರೂಪಿಯಾಗೋ ನಟರಾಜ ನಮ್ಮನೆಯೊಳಗೊಬ್ಬನೆನಿಸುತ್ತಾನೆ. ಅವನ ಗಾಂಭೀರ್ಯ, ಮಕ್ಕಳೊಡಗೂಡಿ ಆಡುವ ವಾತ್ಸಲ್ಯ, ಮುಂಗೋಪದಿಂದೊಮ್ಮೆ ಬೈದು ಮತ್ತೊಮ್ಮೆ ಸಮಾಧಾನಿಸೋ ಪರಿ  ತ್ರಿಶೂಲಧಾರಿಯೊಳಗಿನ ತಂದೆಯ  ಮುಗ್ಧತೆಯನ್ನು ಅನಾವರಣಗೊಳಿಸುತ್ತದೆ. ಭಂಗಿ ಸೇದುತ್ತಾ ಗಣಗಳ ಜೊತೆಗೆ ಊರೂರು ತಿರುಗಬೇಕಾದರೆ ಸ್ನೇಹಮಯ ನಾಯಕನಾಗಿ ಗೋಚರವಾಗುತ್ತಾನೆ. ಭಾವನೆಗಳ ಅಸಮತೋಲನೆಗೆ ಸಾಕ್ಷಿಯಾಗಿ ಮತ್ತೆ ಸ್ಥಿತಪ್ರಜ್ಞತೆಗೆ ಮರಳಿ ಬದುಕಿನ ಗತಿಯನ್ನು ಕಾಪಾಡಿಕೊಳ್ಳುವುದರಿಂದಲೇ ಲಯಕರ್ತನೆನಿಸುತ್ತಾನೆ. ಮಾನವ ಸಹಜ ಗುಣಗಳ ಪ್ರತಿರೂಪದಂತೆ ಕಾಣುವುದರಿಂದಲೇ ದಿಗಂಬರನಾದ ಈಶನು ನಮ್ಮೊಳಗೆ ಇಳಿದುಹೋಗುತ್ತಾನೆ. ಹೀಗೆಲ್ಲಾ ಸಾಮಾನ್ಯರ ಕೈಗೆಟುಕುವುದರಿಂದಲೇ ಏನೋ ಜಿ.ಎಸ್.ಎಸ್ ರವರು 
ಬಾಂದಳ ಚುಂಬಿತ ಶುಭ್ರ ಹಿಮಾವೃತ
ತುಂಗ ಶೃಂಗದಲಿ ಗೃಹವಾಸಿ |
ದೀನ ಅನಾಥರ ದುಖಿಃ ದರಿದ್ರರ 
ಮುರುಕು ಗುಡಿಸಿಲಲಿ ಉಪವಾಸಿ || 
ಎಂದಿದ್ದಾರೆ..  

ಶಿವರಾತ್ರಿಯೆಂಬುದು ದಕ್ಷನನ್ನು ದಹಿಸಿ ವೀರಭದ್ರನಾಗಿದ್ದಕ್ಕೋ, ಹಾಲಾಹಲವನ್ನು ಕುಡಿದು ನೀಲಕಂಠನಾಗಿದ್ದಕ್ಕೋ, ಶಿವೆಯ ಜೊತೆಗೂಡಿ ತಾಂಡವ ನೃತ್ಯವಾಡಿದ್ದಕ್ಕೋ ; ಕಾರಣಗಳು ನೂರಿರಬಹುದು.. ಎಲ್ಲವನ್ನು ಮೀರಿ ಲೋಕಪಾಲನಾದ, ಆದರ್ಶಪ್ರಾಯನಾದ ಶ್ರೀಕಂಠ ನೆನಪಾಗುತ್ತಾನೆ :) ಎಲ್ಲರೊಳಗೆ ಸರ್ವವ್ಯಾಪಿಯಾದ, ಸರ್ವೇಶ್ವರನಾದ , ಸರ್ವಜ್ಞಾನಿಯಾದ ಸದಾಶಿವ ಆವಿರ್ಭಾವಗೊಳ್ಳಲಿ.. ತನ್ಮೂಲಕ ಉತ್ಕೃಷ್ಟ ಜೀವನದ ಅನುಭವವಾಗಲಿ ಎಂಬ ಶುಭಹಾರೈಕೆಗಳೊಂದಿಗೆ ಶಿವರಾತ್ರಿಯ ಶುಭಾಶಯಗಳು.. :) :) :)

2 ಕಾಮೆಂಟ್‌ಗಳು: