ಬುಧವಾರ, ಡಿಸೆಂಬರ್ 6, 2017

ಮೂರೂವರೆ ವರ್ಷದ ಹಿಂದೆ ಶುರುವಾದ ಪಯಣವಿದು..ಮೂರೂವರೆ ವರ್ಷದ ಹಿಂದೆ ಶುರುವಾದ ಪಯಣವಿದು.. ಇಂಜಿನಿಯರಿಂಗ್ ಎಂಬ ನೆಪದಲ್ಲಿ ಚಿಕ್ಕಮಗಳೂರಿನ ಹಾದಿ ಹಿಡಿದಿದ್ದೆ! ಇದೇ ಊರ ಆಯ್ಕೆ ಮಾಡಿಕೊಂಡ ಕಾರಣ  ವರ್ಷ ಪೂರ್ತಿ ಮಳೆ ಸುರಿಯತ್ತೆ ಎಂಬ ಖುಷಿಗೋ, ಸೆಖೆಗಾಲವೇ ಇರುವುದಿಲ್ಲ ಎಂಬ ಸಂತಸಕ್ಕೋ ತಿಳಿದಿಲ್ಲ.. ಬಂದ ಒಂದೆರಡು ತಿಂಗಳು ಸ್ವಲ್ಪ ಜಾಸ್ತಿಯೇ ಕಷ್ಟವಾದರೂ ವರ್ಷವೆರಡು ಕಳೆಯುವಷ್ಟರಲ್ಲಿ ಇಡೀ ಊರು ನನ್ನದಾಗಿಹೋಗಿದ್ದು, ಬಿಟ್ಟು ಬರಲು ಮನಸೇ ಬಾರದಷ್ಟು ನಾ ಈ ನೆಲವ ಹಚ್ಚಿಕೊಂಡಿದ್ದು ಈಗ ಇತಿಹಾಸ.. ಮೊದಲೇ ಊರೂರು ಸುತ್ತೋ ಹುಚ್ಚಿರೋ ನಂಗೆ ಚಿಕ್ಕಮಗಳೂರು ಆಪ್ತವಾಗಿದ್ದು ದೊಡ್ಡ ವಿಷಯವಲ್ಲದಿದ್ದರೂ ಅಂಥದೇ ಮನಃಸ್ಥಿತಿಯ ಗೆಳೆಯರು ಸಿಕ್ಕಿದ್ದು ವಿಶೇಷ. 'ನಮ್ಮ ಚಿಕ್ಕಮಗಳೂರು' ಎಂಬ ನೆಪದಲ್ಲಿ ಪೂರ್ತಿ ಊರನ್ನು ಸುತ್ತಲು ಪ್ರಾರಂಭಿಸಿ ವರ್ಷ ಎರಡಾಯಿತು.. 
ಹೇಳಿ-ಕೇಳಿ ನಮ್ಮೂರು ಹುಲಿ-ಚಿರತೆಗಳಿಗೆ ಪ್ರಸಿದ್ಧವಾದದ್ದು. ಎಸ್ಟೇಟ್ ನ ದಾರಿಯಲ್ಲೆಲ್ಲಾದರೂ ಹುಲಿ ಎದುರಾದರೂ, ಶಾಲೆಯೊಳಗೆ ಚಿರತೆ ಬಂದು ಕೂತು ಪಾಠ ಕೇಳಿದರೂ ಅಚ್ಚರಿಯೇನಿಲ್ಲ :ಫ್ ಹಿಂಗೇ ಯಾವಾಗಲೋ ಊರೊಳಗೆ ಬಂದ ಚಿರತೆಯನ್ನ ನೋಡಿಕೊಂಡು ಬರುವ ಎಂದು ಹೊರಟಾಗ  ಮಾರ್ಗ ಮಧ್ಯದಲ್ಲಿ ಹುಟ್ಟಿಕೊಂಡ ಕನಸು 'ಮುತ್ತೋಡಿ'. 'ಮುತ್ತೋಡಿಯ ಕಾಡು ಅದೆಷ್ಟು ಚಂದವಿದೆ ಗೊತ್ತಾ' ಎಂಬ ಒಂದು ಮಾತು ಸಾಕಿತ್ತು ನಮಗೆ!! ಹಿಂದೆ ಮುಂದೆ ನೋಡದೆ ಮುಂದಿನ ವಾರ ಮುತ್ತೋಡಿಗೆ ಹೋಗುವ ಎಂಬ ಪ್ಲಾನ್ ಸಿದ್ಧವಾಗಿತ್ತು. ಅದ್ಯಾಕೋ ಕಾಲೇಜಿನ ಗಡಿಬಿಡಿಯ ಕೆಲಸಗಳ ನಡುವೆ ಆ ಮುಂದಿನ ವಾರ ತಿಂಗಳುಗಳು ಕಳೆದರೂ ಬಂದಿರಲೇ ಇಲ್ಲ.. ಪರೀಕ್ಷೆಗಳೆಲ್ಲ ಮುಗಿದ ಸಂಭ್ರಮಾಚರಣೆಗೆ ಮತ್ತೆ ಮುತ್ತೋಡಿ ನೆನಪಾಗಿತ್ತು. 
ತೀರ್ಥಹಳ್ಳಿ, ಶೃಂಗೇರಿ, ಶಿವಮೊಗ್ಗ ಹೀಗೆ ತುಂಗೆಯ ಮಡಿಲಲ್ಲೇ ಬೆಳೆದ ನಂಗೆ ಭದ್ರೆಯೆಂದರೆ ಅದೇನೋ ಸೆಳೆತ. ಸಮಾಸಮ ಬಳುಕಿ ತಣ್ಣಗೆ ಹರಿಯೋ ತುಂಗೆ ಪ್ರೀತಿಯ ಸೆಲೆಯಂತೆ ಕಂಡರೆ ರಭಸದಿ ಭೋರ್ಗರೆಯೋ ಭದ್ರಾ ಆಕರ್ಷಣೆಯ ತುತ್ತತುದಿ. ಭದ್ರೆಯ ತಟದ ಕಾಡು ಎಂಬ ಅಂಶ ಮತ್ತೂ ಸೆಳೆದಿತ್ತು ಆ ದಟ್ಟಡವಿಯೆಡೆಗೆ. ಪರೀಕ್ಷೆ ಮುಗಿದ ಮರುದಿನವೇ ಊರಿನ ಕಡೆ ಮುಖ ಮಾಡುವುದ ಬಿಟ್ಟು ಅರಣ್ಯ ಪರ್ವ ಶುರುವಾಗಿತ್ತು. 'ಬೆಳಗ್ಗೆಯೊಂದು ಸಂಜೆಯೊಂದರ ಹಾಗೆ ಎರಡು ಟ್ರಿಪ್ ಇರುತ್ತೆ, ಎಷ್ಟೊತ್ತಿಗ್ ಹೋಗ್ತೀರಾ ?' ಎಂದು ಕೇಳಿದ್ದ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರಿಗೆ ಬೆಳಗ್ಗೆಯೇ ಆಗ್ಬೋದು ಎಂಬ ಉತ್ತರ ನೀಡಿಯಾಗಿತ್ತು. ಹೀಗೆ ವರ್ಷದ ಕಡೆಯ ದಿನಕ್ಕೆ ಕಾಡೊಂದರ ನಡುವೆ ವಿದಾಯ ನೀಡೋ ಸಡಗರ ನಮ್ಮೊಡಗೂಡಿತ್ತು :) 
     ಬೆಳ್ಳಂಬೆಳಿಗ್ಗೆ 3-45 ನಿಂದಲೇ ದಡಬಡಿಸಿ ಎದ್ದು, ಜೊತೆಯಲ್ಲಿ ಉಳಿದವರಿಗೂ ಒಂದಷ್ಟು ಇರ್ರಿಟೇಟ್ ಮಾಡಿ ಎಬ್ಬಿಸಿ , ಮತ್ತಷ್ಟು ಬೈಸಿಕೊಂಡು ಚಿಕ್ಕಮಗಳೂರು ಬಿಡುವ ಹೊತ್ತಿಗೆ ಗಂಟೆ ಐದಾಗಿತ್ತು! ಮಲ್ಲಂದೂರು ರಸ್ತೆಯಲ್ಲಿ ಸುಮಾರು 40-45 ಕಿ.ಮೀ ಹಾವು ಕವಲಿನ ಹಾದಿ ಸಾಗಿದರೆ ಮುತ್ತೋಡಿಯ ಕಾಡು ಸ್ವಾಗತಿಸುತ್ತದೆ. ಗವ್ವೆನ್ನುವ ಕತ್ತಲು, ಒಂದೆಡೆ ಕಾಫಿ-ಟೀ  ಎಸ್ಟೇಟ್; ಮತ್ತೊಂದು ಬದಿ ಸಾವಿರಾರು ಅಡಿಯ ಪ್ರಪಾತ. ಆಗೊಮ್ಮೆ ಈಗೊಮ್ಮೆ ಘಮ್ಮೆನ್ನುವ ಕಾಫಿಯ ತಿರುಳ ಸುಗಂಧ( ನಮ್ಮೂರ ಕಾಫಿ ರುಚಿ ಬಲ್ಲವರಿಗಷ್ಟೇ ಇದು ಸುಗಂಧವಾಗಿರುತ್ತದೆ :ಫ್ ) , ಚಂದ್ರ ಇಲ್ಲದೇ ಸೂರ್ಯ ಮೂಡದೇ ಬರೀ ಚುಕ್ಕಿಗಳಿಂದಲೇ ಕೂಡಿದ್ದ ನೀಲಾಕಾಶ, ಕಾಡಿನ ಬಗೆಗಿಷ್ಟು ನನ್ನದೇ ರಮ್ಯ ಊಹಾಲೋಕ ಜೊತೆಗಿಷ್ಟು ಗೆಳೆಯರ ಮಾತುಕಥೆ! ಮುಂಜಾನೆಯೊಂದು ಇದಕ್ಕಿಂತ ಚಂದವಿರಲಾರದು ಅನ್ನೋ ಭಾವ ನನ್ನೊಳಗೆ.. 
    ದಿನಮಣಿ ಕಣ್ತೆರವ ಹೊತ್ತಿಗೆ ನಾವೈವರು ಭದ್ರಾ ಅಭಯಾರಣ್ಯದ ಮಡಿಲಲ್ಲಿ ಹಕ್ಕಿಗಳ ಕಲರವ ಆಲಿಸುತ್ತಿದ್ದೆವು. ಸುಮಾರು ಹತ್ತು ವರ್ಷಗಳ ಹಿಂದೆ ನಿಟ್ಟೂರಿನ ನೇಚರ್ ಕ್ಯಾಂಪ್ ನಲ್ಲಿ ತಟಸ್ಥವಾಗಿ ಕುಳಿತು ಪಕ್ಷಿಗಳ ಚಿಲಿಪಿಲಿ ಕೇಳಲು ಕಲಿತಿದ್ದ ಅಭ್ಯಾಸ ಇಂದ್ಯಾಕೋ ನಿರಾಯಾಸವಾಗಿ ನನ್ನೊಳಗೆ ಅರಳಿ ನಿಂತಿತ್ತು. ನೀಲಿ ಪುಕ್ಕ, ಕಪ್ಪು ಬಾಲ, ಕೆಂಪು ಕಣ್ಣು, ಚೀಂವ್ ಚೀಂವ್ ಸದ್ದು ಪ್ರತಿ ಪ್ರಕೃತಿ ಪ್ರೇಮಿಯ ಹೃದಯದಲ್ಲಿ ಅವರ್ಣನೀಯ ಆನಂದವ ಮೂಡಿಸುವುದಂತೂ ಸುಳ್ಳಲ್ಲ. ಪೂರ್ತಿ ಬೆಳಕಾಗಿ ಸೂರ್ಯ ರಶ್ಮಿ ಮೈ ತಾಕುವ ಮುಂಚೆಯೇ ತೆರೆದ ಜೀಪಿನಲ್ಲಿ ಸಫಾರಿ ಹೊರಡಲು ತುದಿಗಾಲಲ್ಲಿ ನಿಂತಿದ್ದೆವು ನಾವು!:) 6-45 ರಿಂದ ಮತ್ತೆರಡು ಘಂಟೆ ಈ ಯಾಂತ್ರಿಕ ಯುಗದಿಂದ ದೂರಾಗಿ ಕಾಡೊಳಗೆ ನಾವು ಕಳೆದುಹೋಗಿದ್ದೆವೋ; ನಮ್ಮಳಗೆ ಕಾಡು ಇಳಿದು ಹೋಗಿತ್ತೋ ನಾ ಕಾಣೆ!!  ಕೈ-ಕಾಲೆಲ್ಲಾ ಮರಗಟ್ಟಿ ಹೋಗುವಂಥ ತಣ್ಣನೆ ಕುಳಿರ್ಗಾಳಿ, ದಟ್ಟಾರಣ್ಯದ ನಡುವೆ ಅಪರೂಪಕ್ಕೊಮ್ಮೆ ಚುಂಬಿಸಿ ಹೋಗೋ ದಿನಕರನ ಕಿರಣಗಳು, ಜುಳು ಜುಳನೆ ಸದ್ದು ಮಾಡಿಕೊಂಡು ಹರಿಯೋ ನನ್ನಿಷ್ಟದ ಭದ್ರೆ.. "ಅನುಭವಿಸಿದವರಿಗೇ ಗೊತ್ತು ಅನುಭವದ ಮರ್ಮ!!" ದುರಾದೃಷ್ಟವಶಾತ್ ಪ್ರಾಣಿಗಳಾವುವೂ ಕಣ್ಣಿಗೆ ಬೀಳದಿದ್ದರೂ ಬೇಸರವಾಗದ ರೀತಿಯಲ್ಲಿ ಕಾಡಿನ ಮೋಡಿ ನಮ್ಮನ್ನು ಆವರಿಸಿತ್ತು. 'ಕ್ಯಾಮರಾ ತಂದಿದ್ದೂ ವ್ಯರ್ಥ.. ಒಂದಾದ್ರೂ ಹುಲಿ ಕಾಣ್ಬಾರ್ದಿತ್ತ ಮಾರಾಯ್ತಿ' ಎಂದು ಗೆಳೆಯ ಬೇಸರಿಸುತ್ತಿದ್ದರೆ, ಹುಲಿ ಕಂಡಿದ್ದರೆ ಕಾಡಿನ ಮನಮೋಹಕತೆಯೆಲ್ಲಾ ಹುಲಿಯ ನೆಪದಲ್ಲಿ ಕಳೆದುಹೋಗಿಬಿಡುತ್ತಿತ್ತೇನೋ ಎಂಬ ಭಯ ನನ್ನಾವರಿಸಿ 'ಕಾಣದಿದ್ದಿದ್ದೇ ಒಳ್ಳೆಯದಾಯ್ತು ಬಿಡು..' ಎಂದಿದ್ದ ನನ್ನ ಕೊಂದೇ ಬಿಡುವಷ್ಟು ಕೋಪದಲ್ಲಿ ನೋಡಿ ಮತ್ಯಾವುದೋ ಮರದ ಫೋಟೋ ಕ್ಲಿಕ್ಕಿಸಲು ದಾಪುಗಾಲಿಟ್ಟು ನಡೆದುಬಿಟ್ಟಿದ್ದ ಅವ. ಮರಳಿ ಬರುವ ಹಾದಿಯಲ್ಲಿ ಸೊಂಟ ಬಳುಕಿಸಿ, ಗಾಂಭೀರ್ಯದಿಂದ ನಡೆದು ಬರುತ್ತಿದ್ದ ನೂರು ಗರಿಯ ನವಿಲೊಂದೇ ನಮಗೆ ಕಂಡ ವನ್ಯಜೀವಿ. ಜೀಪಿಳಿಯುವ ಸಮಯಕ್ಕೆ ಡ್ರೈವರ್ ನ ಅದೆ ಹಳೆಯ ಡೈಲಾಗ್ ' ನನ್ನ ಸರ್ವಿಸ್ ನಲ್ಲೇ ಇದೇ ಮೊದಲು ಸಾರ್ ಒಂದೂ ಪ್ರಾಣಿ ಕಾಣಿಸದೇ ಇರೋದು.. ಛೇ ಹೀಗಾಗ್ಬಾರ್ದಾಗಿತ್ತು'!! ಕಿಸಕ್ಕೆಂದು ನಕ್ಕ ಗೆಳತಿಯ ಬಾಯಿ ಮುಚ್ಚಿಸಿ ಎಲ್ಲದಕ್ಕೂ ಅದೃಷ್ಟ ಬೇಕು ಬಿಡಿ ಎಂದು ಅವನ ಮುಂದುವರಿಯುವ 'ವಾರದ ಹಿಂದೆ ಹುಲಿ ಕಂಡಿತ್ತು ಗೊತ್ತಾ'  ಕಥೆಗೆ ಬ್ರೇಕ್ ಹಾಕುವಲ್ಲಿ ನಾವು ಯಶಸ್ವಿಯಾಗಿದ್ದೆವು. ಏನೇ ಆದರೂ ಕಾಡಿನೊಳಗೆ ಐದು ಜನ ಹಿಡಿದು ನಿಲ್ಲುವಷ್ಟು ದೊಡ್ಡದಾದ, ಮುನ್ನೂರು ವರ್ಷಗಳ ಇತಿಹಾಸವಿರೋ ತೇಗದ ಮರದ ಚಿತ್ರ ಈ ಕ್ಷಣಕ್ಕೂ ಕಣ್ಣಲ್ಲೇ ನಿಂತಿದೆ.  
           ಎಲ್ಲ ಅನುಭವಗಳನ್ನೂ ಮತ್ತೆ ಅಮ್ಮನೊಂದಿಗೆ ಹಂಚಿಕೊಳ್ಳುವಾಗ ಚಿಕ್ಕಮಗಳೂರ್ಯಾಕೋ ಇನ್ನೂ ಆಪ್ತವಾದಂತೆ ಭಾಸವಾಗಿತ್ತು. ಮುತ್ತೋಡಿಯ ಕಾಡಿಗೆ ಸಂಜೆಯೂ ಒಮ್ಮೆ ಹೋಗಿ ನೋಡ್ಬೇಕು ಅನ್ನೋ ಆಸೆ ಮನದೊಳಗೆ ಮೂಡಿಯಾಗಿದೆ. ಸೂರ್ಯಾಸ್ತದ ಕೆಂಪು ಕೆಂಪು ರಂಗಲ್ಲಿ ಕಾಡು ಇದರ ನಾಲ್ಕು ಪಟ್ಟು ಸೆಳೆಯಬಹುದೇನೋ ಎಂಬ ಕುತೂಹಲ ನನ್ನಲ್ಲಿ. ಈ ಊರಿನ ಮೋಹಕತೆಗಳೆಲ್ಲಾ ಅಂತೆಯೇ ಉಳಿದುಬಿಡಲಿ.
    " ಅಲ್ಲೆ ಇವೆ ಕಾಜಾಣ ಕೋಗಿಲೆ
           ಏನೆ ಗಿಳಿ ಕಮಕಳ್ಳಿಯೂ.. 
       ಕಂಪೆರೆವ ಸೀತಾಳೆ ಕೇದಗೆ 
          ಬಕುಳ ಮಲ್ಲಿಗೆ ಬಳ್ಳಿಯೂ.. 
       ನೀಲಿ ಬಾನಲಿ ಹಸಿರು ನೆಲದಲಿ 
           ಕಂಗಳೆರಡವೆ ಬಲ್ಲವು.. 
       ಅಲ್ಲಿ ಸಗ್ಗವೆ ಸೂರೆಗೊಂಡಿದೆ
            ನಂದನವೆ ನಾಡೆಲ್ಲವೂ.. "
ಮುತ್ತೋಡಿಯ ಕಾಡೆಂದರೆ ಮತ್ತೆ ಮತ್ತೆ ನೆನಪಾಗೋ ಕುವೆಂಪುರ ಸಾಲುಗಳ ಜೊತೆಗೆ ಕಾಡಿನ ಕಂಪೂ ಚಿರವಾಗಲಿ ಎದೆಯೊಳಗೆ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ