ಬುಧವಾರ, ಡಿಸೆಂಬರ್ 6, 2017

ಇಟಲಿಯ ಕನವರಿಕೆಗಳು ಮುಂದುವರೆಯುತ್ತವೆ..

'ಅಮ್ಮಾ, ನಾ ಸಾಹಿತ್ಯ - ಚರಿತ್ರೆ ಓದ್ಕೊಂಡು ಉಪನ್ಯಾಸಕಿ ಆಗ್ಲಾ ಮುಂದ್ಯಾವತ್ತಾದರೂ ?' ಬಟ್ಟಲು ಕಂಗಳಲ್ಲಿ ಬಿಂಬಿಸಲು ಸಾಧ್ಯವಾಗದಿರೋ ಆಸೆಗಳ ಹೊತ್ತು ನಾ ಹೇಳ್ತಿದ್ರೆ ಅಮ್ಮ ಅಷ್ಟೇ ಆಸ್ಥೆಯಿಂದ ಕೇಳ್ತಾಳೆ..,  ಚರಿತ್ರೆಯ ಹೆಸರು ಕೇಳ್ದಾಗ್ಲೆಲ್ಲಾ ಮೈಯೊಮ್ಮೆ ಕಂಪಿಸೋದುಂಟು ನಂಗೆ! ಹಸಿರು-ಕಾಡು ಎಲ್ಲವೂ ಇಷ್ಟವೇ ಆದ್ರೂ ಪುರಾತನತೆ ಹೆಚ್ಚು ಆಪ್ತ.. ನಾ ಹಿಂದಿನ ಜನ್ಮದಲ್ಲಿ ಈ ಜಾಗದಲ್ಲೆಲ್ಲಾದ್ರೂ ನಡೆದಾಡಿದ್ನಾ ಎಂಬಷ್ಟರ ಮಟ್ಟಿಗೆ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕೋ ಹುಚ್ಚುತನ! ಪಳಿಯುಳಿಕೆಗಳು, ಶಿಲಾಶಾಸನಗಳು, ಭಿನ್ನವಾದ ವಿಗ್ರಹಗಳು ಸೆಳೆಯೋದೇ ಹೆಚ್ಚು.. ಇವತ್ತಿಗೂ ಯಗಚಿಯ ಹಿನ್ನೀರ ತೀರಕ್ಕಿಂತ, ಲಕ್ಯದ ಸೇತುವೆಗಿಂತ, ಕಡೆಗೆ ಗಿರಿಯ ನೀರವತೆಗಿಂತ ಬೇಲೂರಲ್ಲಿ ಸುಮ್ಮನೇ ಬಿದ್ದಿರೋ ಆ ಕಂಬಗಳ ಸಾಲೇ ಕಾಡತ್ತೆ ನನ್ನ.. 'ಈ ಕಂಬಗಳನ್ನೆಲ್ಲಾ ಕೊಡ್ತಾರಾ ಕೇಳಣ ಕಣೇ.. ನಮ್ಮನೆಗ್ ತಗೊಂಡು ಹೋಗ್ಬೇಕು ಅನ್ನಿಸ್ತಿದೆ ನಂಗೆ ' ಅಂತ ಏನೇನೋ ಮಾತಾಡಿ ಗೆಳತಿಯ ಹತ್ತಿರ ಬೈಸಿಕೊಂಡಿದ್ದಿದೆ.. ಅದ್ಯಾವುದೋ ಚಿತ್ರವನ್ನ ಕೇವಲ ಆ ನಟನಲ್ಲಿದ್ದ  ಪುರಾತನವಾದ ಕಂಬಗಳ ಬಗೆಗಿನ ಕನಸಿಗೇ ಹತ್ತಕ್ಕೂ ಹೆಚ್ಚು ಬಾರಿ ನೋಡಿದ್ದಿದೆ.. 
ನಾಗರೀಕತೆಗಳ ಬಗ್ಗೆ, ನದಿಯೊಂದು ದೇಶವ ಕಟ್ಟೋದರ ಬಗ್ಗೆ, ಧಾರ್ಮಿಕ ಆಚರಣೆಗಳ ಬಗ್ಗೆ ಓದಿದಷ್ಟೂ ಮುಗಿಯದ ಕುತೂಹಲ ನನ್ನಲ್ಲಿ! ಉತ್ಕಟತೆಯ ಕಡೆಯ ಹಂತವೇನೋ ಎಂಬುವಷ್ಟರ ಮಟ್ಟಿಗೆ ಸೆಳೆತ.. ಹಂಪಿ, ದುರ್ಗ, ಬೇಲೂರು, ಹಳೇಬೀಡು, ಕಾರ್ಕಳ, ಕೆಳದಿ, ಇಕ್ಕೇರಿ, ಮೈಸೂರು, ಶ್ರವಣಬೆಳಗೊಳ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಗುಲಬರ್ಗಾ.. ಎಲ್ಲವೂ ನನ್ನೊಳಗೊಂದು ಕೌತುಕವ ಮೂಡಿಸಿ ,ಇವತ್ತಿಗೂ ಕಾಡಿಸಿ, ಹೋದಾಗಲೆಲ್ಲಾ ಕಣ್ಣಂಚು ಒದ್ದೆಯಾಗಿಸೋ ಸ್ಥಳಗಳೇ! ಭಾರತದ ಮೂಲೆ ಮೂಲೆ ಸುತ್ತೋ ಆಸೆಯ ಜೊತೆಗೇ ಪರ ರಾಷ್ಟ್ರಗಳಿಗೂ ಹೋಗಿ ಅಲ್ಲಿಯದೊಂದಿಷ್ಟು ಕಾಡುವ ಭಾವಗಳ ನನ್ನದಾಗಿಸಿಕೊಳ್ಳಬೇಕೆಂಬ ಹಪಾಹಪಿ ಇಂದು ನಿನ್ನೆಯದಲ್ಲ.. ಸಾಂಸ್ಕ್ರತಿಕತೆಗಳು, ಸಂಪ್ರದಾಯಗಳು, ಮನಸ್ಥಿತಿಗಳು, ಜೀವನಪದ್ಧತಿಗಳ ಬಗ್ಗೆ ಅಧ್ಯಯನ ಮಾಡೋ ಹಂಬಲ ದಿನ ದಿನಕ್ಕೂ ಹೆಚ್ಚುತ್ತಲೇ ಇದೆ! ಇರಲಿ ಮುಂದ್ಯಾವತ್ತಾದರೂ ಈ ಕಂಗಳಲ್ಲೊಂದಿಷ್ಟು ಬೆರಗು ಹುಟ್ಟಿಸಿಕೊಂಡು ಅದ ನೋಡೋ ಸೌಭಾಗ್ಯ ನಂದಾಗಲಿ.. 
ಇವತ್ತು ನಾನಿಲ್ಲಿ ಹೇಳಲಿಕ್ಕೆ ಬಂದಿರೋ ಸಂಗತಿ ಇದಕ್ಕೆಲ್ಲಾ ಹತ್ತಿರದ್ದೇ.. ಭವ್ಯ ಭಾರತದ ಜೊತೆ ದಿವ್ಯ ಯೂರೋಪ್ ಸಹ ಅಷ್ಟೇ ಕದಲಿಸಿದ್ದಿದೆ ನನ್ನ! ವಿಶ್ವ ಪರ್ಯಟನೆಯ ಮೊದಲ ಭಾಗ ಯೂರೋಪೇ ಆದರೂ ಆಶ್ಚರ್ಯವೇನಿಲ್ಲ.. ಆಧುನಿಕತೆಯೇ ಆವರಿಸಿಕೊಂಡಿರುವ ಅಮೆರಿಕಾದಂತಹ ರಾಷ್ಟ್ರಗಳಿಗಿಂತ ತನ್ನೊಳಗೆ ಸಹಸ್ರ ಸಹಸ್ರ ಗೌಪ್ಯಗಳ ಇಂದಿಗೂ ಕಾಪಿಟ್ಟುಕೊಂಡು ಬಂದಿರೋ ಯೂರೋಪ್ ಅಚ್ಚರಿಯೆನಿಸುತ್ತೆ..  ಸಾಮಾಜಿಕವಾಗಿ, ರಾಜಕೀಯವಾಗಿ, ಐತಿಹಾಸಿಕವಾಗಿ ಏಷ್ಯಾದಿಂದ ವಿಭಿನ್ನವಾಗಿರೋ ಈ ದ್ವೀಪಕಲ್ಪ  ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತದೆ.. ಯೂರೋಪಿನ ಮುಖ್ಯ ಆಕರ್ಷಣೆಯೇ ಇಟಲಿಯೆಂದರೆ ತಪ್ಪಲ್ಲವೇನೋ! ರೋಮ್, ಫ್ಲಾರೆನ್ಸ್, ವೆನೀಸ್.. ಆಹ್!! ಕಣ್ಮುಂದೆಯೊಮ್ಮೆ ಸ್ವರ್ಗ ಹಾದು ಹೋದಷ್ಟು ಖುಷಿ.. ಎತ್ತರೆತ್ತರದ ಕಟ್ಟಡಗಳು, ನಿರ್ಮಾನುಶವೆನಿಸುವ ಬೀದಿಗಳು, ಆಕಾಶಕ್ಕೆ ಎರಡೇ ಹೆಜ್ಜೆ ಎಂದನಿಸೋ ಫ್ಲಾರೆನ್ಸ್ ನ ಎತ್ತರದ ದಿಬ್ಬ, ಮದಿರೆಯ ಅಮಲೇರಿಸೋ ಕ್ಷಣಗಳು.. ಸಾಗುತ್ತಲೇ ಹೋಗುತ್ತದೆ ಮೋಹಕತೆಯ ಪಟ್ಟಿ :) ಕ್ಯಾಥೋಲಿಕ್ ಚರ್ಚ್ ನ ಒಳಗೊಮ್ಮೆ ಕೂತು ಮೌನ ರಾಗವ ಧೇನಿಸೋ ಆನಂದವನ್ನ ಪದಗಳಲ್ಲಿ ವಿವರಿಸೋಕೆ ಸಾಧ್ಯವಾ? ನೀರೊಳಗರ್ಧ ಮುಳುಗಿರೋ ಮನೆಗಳಂತಹ ಕಟ್ಟಡಗಳ ನಡುವೆ ಹಾಯಿದೋಣಿಯಲ್ಲಿ ಹಾದುಹೋಗುವ ಅನುಭವವ ಜೊತೆಯಲ್ಲಿರುವವರಿಗೆ ವಿವರಿಸೋದಾದರೂ ಹೇಗೆ? ಅಲ್ಲೆಲ್ಲೋ ನಡುವೆ ಹಾದಿ ತಪ್ಪಿಸಿಕೊಂಡು ಒಮ್ಮೆ ಗೊಂದಲಕ್ಕೆ ಬಿದ್ದು ಮತ್ತೆ ಹುಡುಕಾಡಿ ಗಮ್ಯ ಸೇರೋವಾಗಿನ ರೋಮಾಂಚನವೆಲ್ಲಾ ಹರವಿಡಲಾರದ ಘಳಿಗೆಗಳೇ ಹೊರತು ಮತ್ತೇನಲ್ಲ.. ವಾಲಿದ ಗೋಪುರಕ್ಕೇನು ಕಮ್ಮಿ ಸೆಳೆಯೋ ಶಕ್ತಿಯಿದೆಯಾ? ಆ ವಾಸ್ತುಗಳನ್ನ ನೋಡುತ್ತಿದ್ದರೇ ಸಾಕು, ಮೈ ಮನವೆಲ್ಲಾ ಗರಿಗೆದರಲಾರಂಭಿಸುತ್ತದೆ.. ಗುರುತ್ವಾಕರ್ಷಣಾ ಶಕ್ತಿಯ ಅಳೆದು ತೂಗಿ ಹಾಗಿದ್ದೊಂದು ಗೋಪುರವ ಕಟ್ಟಬೇಕಾದರೆ ಅದೆಷ್ಟು ಆಲೋಚನಾ ಸರಪಳಿಗಳು ಸುತ್ತಿಕೊಂಡಿವೆಯೋ ಏನೋ ಎಂಬ ಯೋಚನೆಯೇ ಜುಮ್ಮೆನಿಸುತ್ತದೆ.. ಇನ್ನು ರೋಮ್ ಬಗ್ಗೆ ಮಾತನಾಡೋ ಅವಶ್ಯಕತೆಯೇ ಇಲ್ಲ! ಪದಕೋಶಗಳ ಮೀರಿ ಭಾವಭಿತ್ತಿಯೊಳಗೆ ನೆನಪುಗಳ ಮಹಾ ಸಾಗರವ ನಿರ್ಮಿಸೋ ಅದ್ಭುತ ನಗರ.. ಅಲ್ಲಿನ ಚೂಪು ಚೂಪು ಕಲಾಕೃತಿಗಳ ನೋಡುವಾಗೆಲ್ಲಾ ನನ್ನೂರಿನ ಗೋಲಾಕಾರದ ಕಮಾನಿನಂತಹ ರಚನೆಗಳು ನೆನಪಾಗುತ್ತವೆ! ಯಾಕೋ ಏನೋ ತಿಳಿದಿಲ್ಲ ನಂಗೆ.. ರೋಮ್ ಬಗ್ಗೆ ಬರೆಯಲು ಕುಳಿತರೆ ಪುಟಗಳು ಸಾಲದೇ ಹೋಗಬಹುದು ಅಥವಾ ಶಬ್ದಗಳು ಕರಗಿ ಹೋಗಬಹುದು.. 
ಜೀವನಶೈಲಿಯ ಬಗ್ಗೆ ಹೇಳುವುದಾದರೆ ತೀರಾ ವಿಚಿತ್ರವಲ್ಲದಿದ್ದರೂ ನಮಗೆ ಸಹ್ಯವಾಗುವಂತಹದ್ದಲ್ಲವೇನೋ! ಆಹಾರ ಪದ್ಧತಿಯಲ್ಲಿನ ನಿಸ್ಸಾರಗಳು ಒಂಥರಾ ಜಿಗುಪ್ಸೆ ಮೂಡಿಸುತ್ತವೆ.. 'ಅತಿಥಿ ದೇವೋ ಭವ' ಅನ್ನೋ ವಿಚಾರ ಸರಣಿಗಳ ನಡುವೆ ಬೆಳೆದ ಭಾರತೀಯರಾದ ನಮಗೆ ವಾಸ್ತವಕ್ಕೆ ಹತ್ತಿರವಾಗಿ ಬದುಕೋ, ವಿಶೇಷವೆನಿಸೋ ಆದರಾತಿಥ್ಯಗಳ ತೋರದಿರೋ ಆ ನೆಲ ಕಸಿವಿಸಿಯ ಛಾಯೆಯನ್ನೊಮ್ಮೆ ಮೂಡಿಸಿಹೋಗುತ್ತದೆ.. ಇದೆಲ್ಲದರ ಹೊರತಾಗಿಯೂ ಯೂರೋಪಿಯನ್ನರ ಬದುಕು ನಮ್ಮನ್ನೊಮ್ಮೆ ಕಲುಕಿ ಹೋಗದಿರೋ ಸಾಧ್ಯತೆಗಳೇ ಕಮ್ಮಿ! ಜನರ ಭಾವಗಳ ತೀರಾ ಹತ್ತಿರದಿಂದ ನೋಡೋ ನಂಗೆ ಮಾತ್ರ ಈ ತರದ ಅನುಭವವಾ ಗೊತ್ತಿಲ್ಲ ನಂಗೆ..!! ಕಡೆಗೂ ಇಟಲಿ ಭ್ರಮ ನಿರಸನವಾಗದಂತೆ ಮತ್ತೆ ತನ್ನೆಡೆಗೆ ಬರುವಂತೆಯೇ ಮಾಡುತ್ತದೆಯೇ ಹೊರತು ಆಕರ್ಷಣೆಯ ಪ್ರಮಾಣ ಎಳ್ಳಷ್ಟೂ ಕಮ್ಮಿಯಾಗುವುದಿಲ್ಲ.. 
ಇಟಲಿಯೆಂಬ ಮಹಾನಗರ ಅದರೊಳಗೆ ನನ್ನ ಸೆಳೆದುಕೊಂಡ ಪರಿಯಿದು! ಅಪ್ಪ ಆಗಾಗ ಹೇಳ್ತಿದ್ದ ಮಾತುಗಳು ಕಿವಿಯಲ್ಲಿ ಅನುರಣಿಸುತ್ತಿದೆ.. 'ಯಾವುದೇ ಜಾಗ, ಅನುಭವಗಳು ನಮ್ಮದಾಗಬೇಕಾದರೆ ನಾವೇ ಅಲ್ಲಿಗೆ ಹೋಗಬೇಕೆನ್ನೋ ಅಗತ್ಯವಿಲ್ಲ.. ಅನುಭವದ ಕಥೆಗಳನ್ನ ಮನಸ್ಸಿಟ್ಟು ಕೇಳಿದರೆ ಸಾಕು ' ಎಂದು.. ಹೌದಲ್ಲವಾ? ಗೆಳೆಯ ಇಟಲಿಗೆ ಹೊರಟಾಗ ಸಂಭ್ರಮ ಮಗ್ಗುಲಾಗಿ ನನ್ನೆಡೆಗೆ ಹೊರಳಿತ್ತು! ಈ ಹೊತ್ತಿಗೆ ಅವನ ಅನುಭವಗಳ ಕಥೆಗಳು ಮನಃ ಪಟದಲ್ಲಿ ಎಂದೂ ಕಾಣದ ಇಟಲಿಯನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿವೆ! ಫೋಟೋ, ವೀಡಿಯೋಗಳ ಜೊತೆಗೆ ಅವನಲ್ಲಿನ ಭಾವ ಬದಲಾವಣೆಯೂ ನನ್ನನ್ನಿಷ್ಟು ಬರೆಯೋ ಹಾಗೆ ಮಾಡ್ತು ಎಂದರೆ ಅತಿಶಯೋಕ್ತಿಯೇನಲ್ಲ! ಮಹಾನಗರಕ್ಕೆ ಪ್ರದಕ್ಷಿಣೆ ಹಾಕೋ ಸುಸಮಯ ಬೇಗನೇ ಬರಲಿ ನಂಗೆ ಅನ್ನೋದೇ ದಿನ ನಿತ್ಯದ ಪ್ರಾರ್ಥನೆಯಾಗಿ ಹೋಗಿದೆ.. 
ನಿಜವಾಗಿ ಆ ದೇಶವನ್ನ  ಕಣ್ತುಂಬಿಕೊಳ್ಳಬೇಕೆನ್ನೋ ತುಡಿತ ಕ್ಷಣ ಕ್ಷಣಕ್ಕೂ ತೀವ್ರಗೊಳ್ಳುತ್ತಿದೆ ನನ್ನೊಳಗೇ.. ಕಾಲಮಾನದ ಅಂತರ ಮೂರೂವರೆ ಗಂಟೆಯಾದರೂ ನನ್ನೂರಿಗೂ ಅಲ್ಲಿಗೂ ಇರೋ ವ್ಯತ್ಯಾಸ ಅಜಗಜಾಂತರ.. ಗೆಳೆಯನೇ ಆ ದೂರದೂರಿನಿಂದ ತಂದಿರೋ ಪ್ರಾಚೀನತೆಯ ಪ್ರತೀಕವಾಗಿರೋ ಗಡಿಯಾರ ಟಿಕ್ ಟಿಕ್ ಅಂತಿದ್ರೆ ಎದೆಗೂಡಿಗೂ ಆ ಉಡುಗೊರೆಗೂ ಬೆಸೆದಿರೋ ನಂಟು ಮತ್ತೆ ಮತ್ತೆ ನನ್ನಲ್ಲಿಷ್ಟು ಜೀವ ಸಂವೇದನೆಗಳ ಉಂಟು ಮಾಡಿ ಹೋಗ್ತಿದೆ! ಮುಂದೆ ಇಟಲಿಗೆ ಹೋದಾಗ ಆ ನವಿಲು ಮೈಯ ಗಡಿಯಾರ ಸಮಯ ತೋರಿಸುತ್ತೆ ನಂಗೆ ಅನ್ನೋ ಕಂಪನದೊಂದಿಗೆ ಇಟಲಿಯ ಕನವರಿಕೆಗಳು ಮುಂದುವರೆಯುತ್ತವೆ.. :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ