ಬುಧವಾರ, ಡಿಸೆಂಬರ್ 6, 2017

ಹೊಳಪು ಕಂಗಳ ಹುಡುಗಿ

ಹೂ ಎಸಳುಗಳಿಗೆ ರೇಶಿಮೆಯ ಬಣ್ಣ
ಭೂಮಿಗೆ ತಂದವರಾರು ಅಂಗೈಯಲ್ಲಿ ಇಟ್ಟವರಾರು?

ಗಾಳಿ ಬೀಸಿದಂತೆಲ್ಲ ತೆರೆದುಕೊಳ್ಳುವ ರೆಕ್ಕೆ
ನವಿಲ ಗರಿಯ ನೇಯ್ದವರಾರು ಬೆನ್ನಿಗೆ ನವಿರಾಗಿ ಪೋಣಿಸಿದವರಾರು?

ಎದೆನದಿಯಲ್ಲಿ ಸದಾ ಹರಿವ ಪ್ರೀತಿ ಜೇನು
ಅಮೃತದ ಹೊಳೆಗೆ ಅಡ್ಡಗಟ್ಟಿದವರಾರು ಕಲ್ಲಿನ ಅಣೆಕಟ್ಟು ಕಟ್ಟಿದವರಾರು?

ಹುಡುಗಿಯವಳು,,
ಹೂವಂತೆ ಅರಳಿದಳು; ಹಕ್ಕಿಯಂತೆ ಹಾರಿದಳು; ನದಿಯಂತೆ ಹರಿದಳು..

ಹೊಳಪು ಕಂಗಳ ಹುಡುಗಿ ನಕ್ಷತ್ರವಾದಳು
ಆಕಾಶದ ತುಂಬೆಲ್ಲ ಹರಡಿಕೊಂಡಳು!

#Metoo

ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ
ಆದರೆ ಈ ಮನಸ್ಸಿನದ್ದೇ ಇಲ್ಲದ ಕಿರಿಕಿರಿ..

ಹೆಚ್ಚೇನೂ ಬೇಡ ದೇಹಕ್ಕೆ!
ದಕ್ಕಿದರೆ ಒಂದಷ್ಟು ಏಕಾಂತ,
ಇಲ್ಲದಿದ್ದರೆ ಸ್ವಲ್ಪ ಕತ್ತಲು,
ಸುತ್ತ ಪರಿಚಿತರಿದ್ದರೆ ಸಣ್ಣದೊಂದು ಪರದೆ; ಇಲ್ಲದಿದ್ದರೂ ನಡೆದುಹೋಗುತ್ತದೆ ಕೆಲವೊಮ್ಮೆ..
ದಿನಕ್ಕೊಂದು ಬಾರಿ ಬಚ್ಚಲಲ್ಲಿ,
ಮನಸ್ಸಿದ್ದರೆ ಹಾಸಿಗೆಯಲ್ಲಿ! ಪ್ರೇಮವೋ, ಕಾಮವೋ ಕಡೆಗೆ ಬಲಾತ್ಕಾರವೋ
ಮತ್ತೆ ಮತ್ತೆ ಬತ್ತಲಾಗುತ್ತಲೇ ಇರುತ್ತದೆ ಮೈ.


ಮನಸ್ಸಿದೆಯಲ್ಲ ಅದು ಹಾಗಲ್ಲ.
ಅದೊಂದು ಶುದ್ಧ ತಪಸ್ಸಿನಂತೆ.. 
ವರ ಸಿಕ್ಕ ಎಷ್ಟೋ ಹೊತ್ತಿನ ನಂತರವೂ ಇಹದ ಪರಿವೆಯಿರುವುದಿಲ್ಲ!
ಗಾಂಧೀ ಬಜಾರಿನ ಗಲ್ಲಿಯಲ್ಲಿ, ದಾಂಡೇಲಿಯ ಕಾಡಿನಲ್ಲಿ ಅಥವಾ ಮೆಟ್ರೋದ ಕೊನೆಯ ಬಾಗಿಲಿನಲ್ಲಿ.. ಮನಸ್ಸು ಬತ್ತಲಾದಾಗಲೆಲ್ಲಾ ಕಣ್ಣು ತೇವವಾಗುತ್ತದೆ! ಹೃದಯ ಆರ್ದ್ರವಾಗುತ್ತದೆ! ದೇಹ ಕಂಪಿಸುತ್ತದೆ..
ಹಂಗೆಲ್ಲಾ ಸುಖಾಸುಮ್ಮನೆ ಬಯಲಿಗೆ ತೆರೆದುಕೊಳ್ಳುವ ಜಾಯಮಾನದ್ದಲ್ಲ ಅದು.
ಅದಕ್ಕೊಂದು ಸ್ಪರ್ಶ ಬೇಕು, ಆ ಸ್ಪರ್ಶಕ್ಕೆ ಜೇನಿನ ಹಿತವಿರಬೇಕು..
ಅದಕ್ಕೊಂದು ನುಡಿ ಬೇಕು, ಆ ನುಡಿ ಜೀವನವನ್ನೇ ಧಾರೆ ಎರೆದು ಕೊಟ್ಟೇನು ಎಂಬಷ್ಟು ಆಳವಾಗಿರಬೇಕು.


ಹಿಂಗೆಲ್ಲಾ ಸದಾ ಕಿರಿಕಿರಿ ಮಾಡುವ ಮನಸ್ಸಿದೆಯಲ್ಲಾ ಕೆಲವೊಂದು ಬಾರಿ ವಿಚಿತ್ರವಾಗಿಬಿಡುತ್ತದೆ!!
ಯಾವುದೇ ತಲೆಬುಡಗಳಿಲ್ಲದೆ ಭೋರ್ಗರೆದು ಸುರಿಯುವಷ್ಟು ದುಖಃವನ್ನು ದಯಪಾಲಿಸುತ್ತದೆ..
ಸದ್ಯಕ್ಕೆ ಅಂಥದೇ ಒಂದು ದುಃಖ ಕಣ್ಣೆದುರಿಗಿದೆ. ಅದೇ #Metoo

ಏನೇ ಹೇಳಿ;;
ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ
ಆದರೆ ಈ ಮನಸ್ಸಿನದ್ದೇ ಇಲ್ಲದ ಕಿರಿಕಿರಿ..

ಥೇಟ್ ಅಪ್ಪನ ತರಹದ್ದು!

ನಂಗೊಂದು ಸಾದಾಸೀದಾ ಬದುಕು ಬೇಕು
ಥೇಟ್ ಅಪ್ಪನ ತರಹದ್ದು! 
ಆರಕ್ಕೇರದ ಮೂರಕ್ಕಿಳಿಯದ
ಸಮಸ್ಥಿತಿಯ ಸಮಚಿತ್ತತೆಯ ಬದುಕು..


ಬೇಜಾರಾದಾಗ ಕಾಶಿಗೋ ರಾಮೇಶ್ವರಕ್ಕೋ ಯಾತ್ರೆ ಹೋಗುವ,
ಖರ್ಚು ಹೆಚ್ಚಾಯಿತೆನಿಸಿದಾಗ 'ಈ ಸಲ ಹಬ್ಬಕ್ಕೆ ಬಟ್ಟೆಯಿಲ್ಲ' ಎಂದು ಘೋಷಿಸುವ,
ಇಂಕ್ರಿಮೆಂಟ್ ಬಂದಾಗ ಮನೆಯವರ್ಯಾರಿಗೂ ಹೇಳದೇ 
ಅನಾಥಾಶ್ರಮಕ್ಕೋ, ಶಾಲೆಗೋ ದಾನ ಕೊಟ್ಟುಬಿಡುವ ಅದೇ ಅಪ್ಪನ ಬದುಕು ಬೇಕು ನಂಗೆ..

ಯಾವತ್ತಿಗೂ ಪ್ರೀತಿಯನ್ನು ಬಾಯಿಬಿಟ್ಟು ಹೇಳದೇ ಬರಿದೆ ಕ್ರಿಯೆಯಲ್ಲಿಯೇ ವ್ಯಕ್ತಪಡಿಸುವ,
ಐವತ್ತೈದರ ಹರಯದಲ್ಲಿಯೂ ಸ್ಕೂಟಿ ಕಲಿಯುವಷ್ಟು ಉತ್ಸಾಹವಿರುವ,
ಡಾಕ್ಟರಿಗೇ ಆಶ್ಚರ್ಯವಾಗುವಷ್ಟು ದೇಹಕ್ಕೆ ಒಗ್ಗಿಹೋಗಿರುವ ತಂಬಾಕಿನ ಚಟವನ್ನೇ 
ಜೀವನಪ್ರೀತಿಯೆನ್ನುವ ಹೂಬೇಹೂಬು ಅಪ್ಪನಂಥದ್ದೊಂದು ಬದುಕು ಬೇಕು ನಂಗೆ..

ಕನ್ನಡಿ ಪಾತ್ರವನ್ನಷ್ಟೇ ಪ್ರತಿಬಿಂಬಿಸುತ್ತದೆ,,, ಆದರೆ ಕಣ್ಣಿನದ್ದೋ.. ಅದು ಪಾತ್ರದಾಚೆಗಿನ ಹುಡುಕಾಟ!

ಬಣ್ಣ ಅಳಿಸಿ, ವೇಷ ಕಳಚಲು ಹೊರಡುತ್ತೇನೆ ನಾನು! 
'ಪರದೆ ಎಳೆಯುವ ಮುನ್ನ ಮುಖ ತೋರಿಸಬೇಕಲ್ಲ'
ಹೊರಗಿನಿಂದ ಧ್ವನಿಯೊಂದು ಕೇಳಿಬರುತ್ತದೆ.. ಪಾತ್ರಧಾರಿಯಾಗಿಯೇ ಕಾಣಿಸಿಕೊಳ್ಳಬೇಕೇನು??
ಮರುಪ್ರಶ್ನೆಗೆ ಅಲ್ಲಿ ಉತ್ತರವಿಲ್ಲ..

ಬಣ್ಣ ಅಳಿಸದೆಯೇ, ವೇಷ ಕಳಚದೆಯೇ ಸಭೆಯ ಎದುರಿಗೆ ಬಂದು ನಿಲ್ಲುತ್ತೇನೆ..
ಪಾತ್ರದ ಪರಿಚಯಿಕೆ ಪ್ರಾರಂಭ!
ಅಲ್ಲಿಷ್ಟು ಇಲ್ಲಿಷ್ಟು ಗುಸುಗುಸು ಪಿಸುಪಿಸು..
ನಡು ನಡುವೆಯೊಮ್ಮೆ ಚಪ್ಪಾಳೆ.
ಹೆಸರು ಕರೆದ ತಕ್ಷಣ ಒಂದಡಿ ಹೆಜ್ಜೆ ಮುಂದಿಟ್ಟು, ಕೈ ಜೋಡಿಸಿ ನಮಸ್ಕರಿಸಿ, ಮುಗುಳ್ನಕ್ಕು... ಹಃ!!
'ಬೇಗ ಬೇಗ ಬಟ್ಟೆ ಬದಲಾಯಿಸಿ,, ಹೊತ್ತಾಯಿತು ' ಮತ್ತದೇ ಹೊರಧ್ವನಿ.
ಕೋಣೆಯೊಳಗಿನ ಕನ್ನಡಿ ಇಣುಕುತ್ತದೆ ಕಣ್ಮುಂದೆ.. 
ಸ್ತ್ರೀ ಸಹಜ ಗುಣವದು.. ಬಿಡಲಾದೀತೇ? ಕನ್ನಡಿಯಲ್ಲೊಮ್ಮೆ ಪ್ರತಿರೂಪಕ್ಕಾಗಿ ಹುಡುಕುತ್ತೇನೆ..
ಪಾತ್ರದ್ದೋ, ಪಾತ್ರಧಾರಿಯದ್ದೋ?? ಕನ್ನಡಿಯದ್ದು ಕುಹಕದ ನಗು..


ಚೂರು ಕೆದರಿದ ಮುಂಗುರುಳು, ಕಣ್ಣೀರಿಳಿದಿದ್ದರಿಂದಲೋ ಏನೋ ಆಚೀಚೆಯಾದ ಕಾಡಿಗೆ,
ಮಾಸಿದ ತುಟಿಯ ರಂಗು,ಅಲ್ಲಲ್ಲಿ ಅಳಿಸಿ ಹೋದ ಮುಖದ ಮೇಕಪ್ಪು, 
ಬಾಡಿಹೋಗಿ ಭಾರವೆನಿಸುತ್ತಿರುವ ಮುಡಿದ ಹೂವು..
ಕನ್ನಡಿ ಪಾತ್ರವನ್ನಷ್ಟೇ ಪ್ರತಿಬಿಂಬಿಸುತ್ತದೆ,,, ಆದರೆ ಕಣ್ಣಿನದ್ದೋ.. ಅದು ಪಾತ್ರದಾಚೆಗಿನ ಹುಡುಕಾಟ!


ಪಾತ್ರದೊಂದಿಗಿನ ಬದುಕೇ ಚಂದವಿತ್ತಲ್ಲವಾ ಎನಿಸುವಷ್ಟರಲ್ಲಿ ವಾಸ್ತವ ಬಾಗಿಲು ದಾಟಿ ಒಳಬರುತ್ತದೆ..
ಇಷ್ಟವಿಲ್ಲದಿದ್ದರೂ ಇದ್ದಂತೆ ನಟಿಸಿ ಸುಮ್ಮನೇ ಹೆಜ್ಜೆ ಹಾಕುತ್ತೇನೆ.
ಮುಂದಿನದ್ದೆಲ್ಲವೂ ಬಣ್ಣ ಹಚ್ಚದೇ ನಟಿಸಬೇಕಾದ ಬದುಕ ಪಾತ್ರ!
ನನ್ನೊಳಗು ತೆರವುಗೊಳ್ಳುವುದು ರಂಗದ ಮೇಲೆಯೇ ಎಂಬುದು ಮತ್ತೆ ಮತ್ತೆ ಅರಿವಾಗುತ್ತದೆ.
ಕಾಯತೊಡಗುತ್ತೇನೆ ನಾನು!
ಬಣ್ಣ ಹಚ್ಚಲು, ವೇಷ ಧರಿಸಲು,,,

ಅವಳ ವಿಷದ ಬಟ್ಟಲಲ್ಲಿ ನಾನೂ ಪಾಲು ಪಡೆದಿದ್ದೇನೆ ಈಗ..

ಅಮೃತವನ್ನೇ ಉಣಿಸಬಹುದಿತ್ತಲ್ಲಾ
ವಿಷದ ಬಟ್ಟಲನ್ನೇಕೆ ತಂದು ಸುರಿದರು?
ಆಕಾಶ ನೋಡುತ್ತಾ ಕೇಳುತ್ತಾಳೆ ಅವಳು..
ಉತ್ತರವಿಲ್ಲದೆ ಸುಮ್ಮನೆ ನಕ್ಷತ್ರ ಎಣಿಸುತ್ತಿರುವಂತೆ ನಟಿಸುತ್ತೇನೆ ನಾನು.

ಅಪರಾತ್ರಿಯ ಸಂವಾದಗಳಿವು ಮೌನದೊಂದಿಗೇ ಘಟಿಸುತ್ತವೆ..
ಅವಳು ಮಾತಿಗಿಳಿಯುವ ಮುಂಚೆಯೇ ಮೂಕಳಾಗುತ್ತೇನೆ! 
ಪ್ರಶ್ನೆಗಳೆಲ್ಲಾ ನೇರ ಎದೆಯ ಕವಾಟಕ್ಕೇ ಗುರಿಯಾಗಿರುತ್ತವೆ.
'ಘಾಸಿಯಾಗುತ್ತದೆ ನನ್ನೆದೆಗೂ'.. ಊಹೂಂ ಆಲಿಸುವಷ್ಟು ಸಹನೆ ಅವಳಿಗಿಲ್ಲ!
 ಅವಳ ಸ್ಥಾನದಲ್ಲಿ ಮತ್ಯಾರಿದ್ದರೂ ಇರುತ್ತಿರಲಿಲ್ಲವೇನೋ..

ಪಾಪದ ಹೆಣ್ಣು ಮಗು.. ಲಾಲಿಸಬೇಕೆನಿಸುತ್ತದೆ,, ಪಾಲಿಸಬೇಕೆನಿಸುತ್ತದೆ,, 
ಬಿಗಿದಪ್ಪಿ ಸಮಾಧಾನಿಸಬೇಕೆನಿಸುತ್ತದೆ..
ಮತ್ತೆ ಮತ್ತೆ ಅಸಹಾಯಕತೆಯ ಕೊಂಡಿಗಳಿಗೆ ನಮ್ಮನ್ನು ನಾವೇ ಬಂಧಿಸಿಕೊಂಡು ನರಳುತ್ತೇವೆ! 
ನಾನಿಲ್ಲಿ, ಅವಳಲ್ಲಿ..


ಸೋತಿದ್ದೇನೆ ನಾನೂ, ಅವಳಂತೆಯೇ
ಬದುಕ ಆಯ್ಕೆಗಳಲ್ಲಿ,, ಇಟ್ಟ ನಂಬಿಕೆಯಲ್ಲಿ
ಕುಸಿದಿದ್ದೇನೆ ನಾನೂ, ಅವಳಂತೆಯೇ
ಮುರಿದುಬಿದ್ದ ಪ್ರೀತಿಯಲ್ಲಿ,, ಛಿದ್ರಗೊಂಡ ಕನಸುಗಳಲ್ಲಿ..

ಅವಳ ವಿಷದ ಬಟ್ಟಲಲ್ಲಿ ನಾನೂ ಪಾಲು ಪಡೆದಿದ್ದೇನೆ ಈಗ.. 
ತುಂಬುವುದಾದರೆ ಇಬ್ಬರ ಮಡಿಲಿಗೂ ವಿಷವನ್ನೇ ತುಂಬಿಬಿಡಲಿ!
ಸಾಧ್ಯವಾದರೆ ವಿಷದ ಬಟ್ಟಲಿಗೂ ಪ್ರೀತಿಯನ್ನು ಸುರಿಯುತ್ತೇವೆ.. 
ಇಲ್ಲವಾದರೆ ವಿಷವನ್ನೇ ಅನುದಿನವೂ ಗುಟುಕಿಸುತ್ತಾ, ಅದನ್ನೇ ಅಮೃತವೆಂಬಂತೆ ಭಾವಿಸುತ್ತಾ ಬದುಕಿಬಿಡುತ್ತೇವೆ..

’ಹೂ ಬಿಟ್ಟ ಮರ.. ಎದೆಯ ತುಂಬ ಚಿಟ್ಟೆ ಸಾಲು’

ಪದ್ಯವಾಗಿಸಲು ಹೋದ ಪದಗಳೆಲ್ಲಾ ಗದ್ಯಗಳಾಗಿಬಿಡುತ್ತವೆ
ಅದೇಕೋ ಕವಿತೆ ಮುನಿಸು ತೋರಿ ದೂರ ನಿಂತುಬಿಟ್ಟಿದೆ ನನ್ನಿಂದ
ಕಾವ್ಯವೆಲ್ಲಾ ಕಥೆಗಳಾಗಿಬಿಟ್ಟಿವೆ!
ಪ್ರಾಸ. ಲಯ-ಲವಲವಿಕೆ ಯಾವುದೂ ಘಟಿಸುತ್ತಲೇ ಇಲ್ಲ..
ಗರಿಗಳಷ್ಟು ಹಗುರವಾಗಿಮಂಜಿನಷ್ಟು ಬಿಳುಪಾಗಿ ಕವಿತೆ ಹೊಮ್ಮಬೇಕಿತ್ತು.
ಹೊಗೆಯಷ್ಟು ದಟ್ಟವಾಗಿಬೆಳಕಿನಷ್ಟು ತೀವ್ರವಾಗಿ ಕಥನ ಹಬ್ಬುತ್ತದೆ!
ಉಸಿರಾದಲು ಕಷ್ಟವಾಗುವಷ್ಟು ಗಟ್ಟಿಯಾಗಿಬಿಡಿಸಿಕೊಳ್ಳಲು ಸಾಧ್ಯವಾಗದಷ್ಟು ಬಿಗಿಯಾಗಿಕವಿತೆ ಒಮ್ಮೆ ತಬ್ಬಿಬಿಡಬೇಕು ನನ್ನ:)
            ಕವಿತೆಗಳ ಮೇಲೆ ಹೀಗೊಂದು ತೀವ್ರತರವಾದ ಪ್ರೀತಿ ಉಕ್ಕುವಂತೆ ಮಾಡಿದ್ದು ಕೃಷ್ಣರವರ ಕವಿತೆಗಳು.  ಮತ್ತೆ ಮತ್ತೆ ಹುಟ್ಟುತ್ತೇನೆಚಿತ್ರವಾಗಿ ಕಾಡುತ್ತೇನೆ ಎನುತ್ತಲೇ ಸಾಲುಗಳು ನಮ್ಮನಾವರಿಸಿಕೊಂಡುಬಿಡುತ್ತವೆ ಹಾಗೂ ಕಾಡುತ್ತಲೇ ಹೋಗುತ್ತವೆ. ಹೂ ಹುಡುಗಿಯೆಂಬ ಸಂಭೋದನೆಯೇ ಇನ್ನಷ್ಟು ಮತ್ತಷ್ಟು ಆಪ್ತವಾಗಿಸುತ್ತವೆ. ಚಿತ್ರಗಳ ನಂತರ ಪದಗಳು ಮೂಡುತ್ತವೆಯೋಪದಗಳ ಜೊತೆಜೊತೆಗೇ ರೇಖೆಗಳು ರೂಪು ತಳೆಯುತ್ತವೆಯೋ ಎಂಬುದೊಂದು ಅನುಮಾನ ನನ್ನೊಳಗೆ. ಒಮ್ಮೆ ಕನ್ನಡಿಯೊಳಗೆ ಹೂ ಬಿಟ್ಟ ಕನಸ ಮರಮತ್ತೊಮ್ಮೆ ಒಲೆಯುರಿಯ ನಿಗಿನಿಗಿ ಕೆಂಡದಂಥಾ ವಾಸ್ತವಮಗದೊಮ್ಮೆ ಬಾಚಿತಬ್ಬಿಬಿಡೋಣ ಎನ್ನುವಂಥಾ ಮೃದುಲ ಭಾವಗಳು. ಕೃಷ್ಣರ ಚಿತ್ರಕಾವ್ಯದ ಕಡಲಿನ ಪ್ರತಿಹನಿಯೂ ಎದೆಯ ಚಿಪ್ಪಿನಲ್ಲಿ ಮುತ್ತಾಗುವಂಥವುಗಳೇ.. :)
            ಕೃಷ್ಣರ ವ್ಯಕ್ತಿತ್ವ ಆಕರ್ಷಿಸಿದಷ್ಟೇ ಕವಿತೆಗಳು ಸೂಜಿಗಲ್ಲಿನಂತೆ ಸೆಳೆದಿವೆ ನನ್ನನ್ನು. ಮನದ ಆಕಾಶದಲ್ಲಿ ಅಗಾಧ ಮೌನವನ್ನುಅನಂತ ಪ್ರೇಮವನ್ನೂಅವ್ಯಕ್ತ ನೋವುಗಳನ್ನೂ ಸೃಷ್ಟಿಸುವ ಶಕ್ತಿ ಈ ನಕ್ಷತ್ರದ ಹೊಳಪಿರುವ ಕವಿತೆಗಳಿಗಿದೆ. ಕಾವ್ಯ ಪ್ರಪಂಚಕ್ಕಿರುವ ಸಂಪೂರ್ಣ ಸ್ವಾತಂತ್ರ್ಯವನ್ನು ತನ್ನೆಡೆಗೆ ಎಳೆದುಕೊಂಡು,ಅದ್ಭುತವೆನಿಸೋ ಪದಗಲನ್ನು ಪೋಣಿಸಿ ನಮ್ಮೆದುರಿಟ್ಟು ’ಇದು ಹೇಗಿದೆ ಹೇಳಿ..’ ಎನ್ನುವ ಕೃಷ್ಣರ ದನಿಯಲ್ಲಿ ಆಳವಾದ ಜೀವನಪ್ರೀತಿ ಮತ್ತು ನನ್ನ ಕಂಗಳಲ್ಲಿ ಮುಗಿಯದ ಬೆರಗು. ಕಟ್ಟುಪಾಡು ಎಂತನಿಸುವ ಎಲ್ಲದರಿಂದಲೂ ದೂರವೇ ಉಳಿಯುವುದರಿಂದಲೇ ಏನೋ ಬೇಲಿಯಾಚೆಗಿನ ಭಾವಗಳೆಲ್ಲಾ ಚುಕ್ಕಿಗಳಾಗಿ, ಚಿತ್ರಗಳಾಗಿ,ಪದ್ಯಗಳಾಗಿ ಕೃಷ್ಣರಿಗೆ ದಕ್ಕಿಬಿಡುತ್ತವೆ.
            ಅರಮನೆಯೊಳಗಿನ ಜೋಳಿಗೆಯಲ್ಲಿ ಬುದ್ಧನೆಂಬ ಅಗುಲನ್ನು ಹುಡುಕುವಾಗಹೊಸ್ತಿಲ ಬಳಿ ನಿಂತ ಯಶೋಧರೆಯ ಕನವರಿಕೆಗಳು ಕದ ತಟ್ಟುತ್ತವೆ. ಅವ್ವನ ಬುತ್ತಿಗಂಟಿನೊಂದಿಗೆ ಲಂಕೇಶರನ್ನು ನೆನೆವ ಹೊತ್ತಿಗೆ ಕಿಟಕಿಯಾಚೆಗಿನ ವಿಸ್ಮಯ ಲೋಕದ ಬಾಗಿಲು ತೆರೆದು ತೇಜಸ್ವಿ ಒಳಬಂದಿರುತ್ತಾರೆ. ’ಹೂ ಬಿಟ್ಟ ಮರ.. ಎದೆಯ ತುಂಬ ಚಿಟ್ಟೆ ಸಾಲು’ ಎನ್ನುವಲ್ಲಿ ಮೂಡುವ ನವಿರು ಭಾವ’ಮನ ತುಂಬಿದಳು ಹಾರಿಬಿಟ್ಟೆ.. ರೇಖೆಗಳಂತೆ ಹರಡಿಬಿಟ್ಟೆ’ ಎನ್ನುವಷ್ಟರಲ್ಲಿ ಪ್ರೀತಿಯಾಗಿ ಹಬ್ಬಿನಿಲ್ಲುತ್ತದೆ. ’ಹಕ್ಕಿಗಳಿಗೆ ಬೇಕಂತೆ ಸೂರು.. ಕೊಟ್ಟು ಬಿಡೋಣ ಈ ಬೆಂಗಳೂರು’ ಇಂಥಾ ಸಾಲುಗಳು ಮನ ಕಲುಕುವ ರೀತಿಯನ್ನುಅವು ಮೂಡಿಸುವ ಕಂಪನಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ನನ್ನಿಂದ ಅಸಾಧ್ಯ.
            ಚುಕ್ಕೆಹಾಡು ಅಂತೆಲ್ಲ ಅನಿಸಿದ್ದ ಇವರ ಚಿತ್ರಕಾವ್ಯಲೋಕ ಈಗ ಶಬ್ಧದಾಚೆಯ ಕನವರಿಕೆಗಳು.. ಭಾವಕೋಶದ ಭಿತ್ತಿಯ ಮೇಲೆ ಸಹಸ್ರ ವರ್ಣಗಳು..

'ದೇವರಮನೆ' ಎಂಬ ಊರು ನನ್ನೊಳಗೆ ಇಳಿದು ಹೋದ ಕಥೆ

ಇದ್ದಕ್ಕಿದ್ದಂತೇ ಗೆಳೆಯ ಕರೆ ಮಾಡಿ 'ನಾಳೆ ಕೆಲಸನೆಲ್ಲಾ ಬದಿಗಿಟ್ಟು ಫ್ರೀ ಆಗಿರೇ.. ಎಲ್ಲಿಗೋ ಹೋಗಲಿಕ್ಕಿದೆ' ಎಂದಿದ್ದ. 'ಎಲ್ಲಿಗೆ', 'ಯಾಕೆ', 'ಎಷ್ಟೊತ್ತಿಗೆ', 'ಹೇಗೆ',  'ಯಾರ್ಯಾರು' ಹೀಗೆ ನೂರೆಂಟಿದ್ದ ನನ್ನ ಪ್ರಶ್ನೆಗಳಲ್ಲಿ ಯಾವುದಕ್ಕೂ ಉತ್ತರಿಸದೆ ನಾಪತ್ತೆಯಾಗಿದ್ದ. ತಲೆಯೊಳಗೆ ಹುಳ ಬಿಟ್ಟುಕೊಂಡು ಇಡೀ ದಿನ ಬೆಕ್ಕಿನಂತೆ ಶತಪಥ ತಿರುಗಿದ್ದೆ ನಾ. ಅದೆಷ್ಟು ಗೋಗರೆದರೂ ಸ್ಥಳ ಯಾವುದೆಂದು ಸುಳಿಹೂ ಕೊಡಲಿಲ್ಲ ಆ ಪುಣ್ಯಾತ್ಮ. ಫೋಟೋಗ್ರಫಿಯ ನೆಪದಲ್ಲಿ ಅವನು ಊರು ಸುತ್ತುತ್ತಿದ್ದರೆ, ಬೆನ್ನು ಹತ್ತಿದ ಬೇತಾಳದಂತೆ ನಾನೂ ಅವನ ಬಾಲ ಹಿಡಿದು ಹೋಗುತ್ತಿದ್ದೆ! 'ಇರ್ರಿಟೇಟ್ ಮಾಡ್ಬೇಡ ನಂಗೆ.. ನಿನ್ನ ಎಲ್ಲಾ ಕಡೆನೂ ಕರ್ಕೊಂಡ್ ಹೋಗೋಕೆ ಸಾಧ್ಯ ಆಗಲ್ಲ' ಎಂದು ಬೈದು ನನ್ನ ಬಿಟ್ಟು ಹೋಗುತ್ತಿದ್ದುದೇ ಹೆಚ್ಚು. ಇವತ್ಯಾಕೋ ಅವನೇ ಸಿದ್ಧನಾಗಿರು ಎಂದಿದ್ದು ಚಕಿತಳನ್ನಾಗಿ ಮಾಡಿತ್ತು ನನ್ನ. ಯಾವ ಸ್ಥಳ ಎಂಬ ಸುಳಿವೇ ಇಲ್ಲದೆ ಸುಮ್ಮನೆ ತಯಾರಾಗಿ ನಿಂತಿದ್ದೆ ನಾ. ಮತ್ತೆ ಪಯಣ ಸಾಗಿದ್ದು ಮೂಡಿಗೆರೆಯ ರಸ್ತೆಯಲ್ಲಿ. 'ದೇವರಮನೆಗಾ!!??' ಎಂಬ ಉದ್ಗಾರ ಹೊಮ್ಮಿತ್ತು ನನ್ನಿಂದ.
      ವರ್ಷದ ಹಿಂದೆ ಮೂಡಿದ್ದ ಕನಸು "ದೇವರಮನೆ".  ಹೆಸರೇ ಎಲ್ಲಕ್ಕಿಂತಲೂ ಹೆಚ್ಚು ಆಕರ್ಷಿಸಿತ್ತು. ಜಾನಪದ ಕಥೆಯೊಂದರ ಪ್ರಕಾರ ಶಿವ ತನ್ನ ಬಸವನನ್ನು ಭೂಲೋಕದ ಜನರ ಯೋಗಕ್ಷೇಮ ವಿಚಾರಿಸಲು ಕಳುಹುತ್ತಾನೆ. ಜನರು ಸಂಕಷ್ಟದಿಂದ ನರಳುತ್ತಿದ್ದರೂ ಬಸವ ಎಲ್ಲರೂ ಸುಕ್ಷೇಮದಿಂದಿದ್ದಾರೆ ಎಂಬುದಾಗಿ ಸುಳ್ಳು ಹೇಳುತ್ತದೆ. ಸತ್ಯಾಂಶ ತಿಳಿದ ಪರಶಿವನು ನೀನು ಜನಗಳ ಸೇವೆ ಮಾಡುತ್ತಾ ಅವರ ಬಡತನವನ್ನು ನಿವಾರಿಸು ಎಂದು ಶಾಪವನ್ನು ನೀಡುತ್ತಾನೆ. ಹೀಗೆ ಭೂಮಿಗೆ ಬಂದ ಬಸವನ ಹಿಂದೆ ಭಗವಂತನೂ ಕಾಲಭೈರವನಾಗಿ ಬಂದು 'ದೇವರಮನೆ'ಯಲ್ಲಿ ನೆಲೆ ನಿಲ್ಲುತ್ತಾನೆ. ಹೀಗೆ ಕಥೆಯ ಗುಂಗು ಹಿಡಿದು, ಜೊತೆಗೆ ಅಲ್ಲಿಷ್ಟು ಕಾಡಿದೆ ಎಂಬ ವಿಷಯ ತಿಳಿದು ದೇವರಮನೆಗೆ ಹೋಗುವ ಇರಾದೆಯನ್ನು ವ್ಯಕ್ತಪಡಿಸಿದ್ದೆ. ಪ್ರಾಜೆಕ್ಟ್, ಪೇಪರ್ ಪ್ರೆಸೆಂಟೇಶನ್ ಎಂಬ ಹುಚ್ಚು ಹಿಡಿದು ತಲೆ ರೋಷ ಹಿಡಿಸಿಕೊಂಡಿದ್ದ ನನ್ನ ಅಲ್ಲಿಗೆ ಕರೆದೊಯ್ಯುವ ಮನಸು ಮಾಡಿದ್ದ ಗೆಳೆಯ! ಮೂಡಿಗೆರೆಯಿಂದ ಕಳಸದ ರಸ್ತೆಯಲ್ಲಿ ಸಾಗಿ, ಬಲಕ್ಕೆ ತಿರುಗಿದರೆ ದೇವರಮನೆಗೆ ಸುಮಾರು 20ಕಿ.ಮೀ ನ ಹಾದಿ. ಹಾವು ಕವಲಿನ ದಾರಿಯಾದರೂ , ಗುಂಡಿ-ಹಳ್ಳಗಳಿಲ್ಲವಾದ್ದರಿಂದ ಪ್ರಯಾಣ ಆಯಾಸವೆನಿಸುವುದಿಲ್ಲ. ದಾರಿಯ ಇಕ್ಕೆಲಗಳಲ್ಲಿ ಕಾಫಿ ಎಸ್ಟೇಟ್, ಕಿ.ಮೀ ಗಟ್ಟಲೆ ದೂರವಿರೋ ಮನೆಗಳು, ಮಧ್ಯೆ-ಮಧ್ಯೆ ತಲೆದೋರೋ ಜಾನವಾರುಗಳು. ದಾರಿಯೊಂದಿಷ್ಟು ಗೊಂದಲವಾಗಿ 'ದೇವರಮನೆ' ತಲುಪುವ ಹೊತ್ತಿಗೆ ಸಮಯ ಮಧ್ಯಾಹ್ನ ಮೂರಾಗಿತ್ತು.
ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಂಗೊಳಿಸೋ ಪರ್ವತಗಳ ಶ್ರೇಣಿ. ಸುತ್ತ ತಲೆಯೆತ್ತಿ ನಿಂತಿರೋ ಗಿರಿಗಳ ನಡುವೆ ಸುಶೋಭಿಸುತ್ತಿದ್ದಾನೆ ಕಾಲಭೈರವನಾದ ಗಿರಿಜಾವಲ್ಲಭ. ಕಲ್ಲು ಕಡೆದು ನಿರ್ಮಿಸಿರೋ ಶಿವನ ಆಲಯ ಹೆಚ್ಚೇನೂ ಅಲಂಕಾರವಿಲ್ಲದೇ, ನಿರಾಭರಣ ಸುಂದರಿಯಂತೆ ಆಕರ್ಷಿಸುತ್ತದೆ. ದೇವಸ್ಥಾನದ ಎದುರಿನಲ್ಲಿಯೇ ದೊಡ್ಡದೊಂದು ಕೆರೆ. ಕೆರೆಯ ಮಧ್ಯಭಾಗದಲ್ಲಿ ಕಲ್ಲಿನಿಂದ ನಿರ್ಮಿಸಿರೋ ಕಲ್ಯಾಣಿ. ಅಭಿಷೇಕ ಪ್ರಿಯನಾದ ಈಶ್ವರನಿಗೆ ಈ ಕಲ್ಯಾಣಿಯಿಂದಲೇ ನಿತ್ಯ ಜಲ ಪೂರೈಕೆ. ದೇವಾಲಯದ ಹಿಂಭಾಗದಲ್ಲಿ ಬಿಮ್ಮನೆ ಹರಡಿರೋ ಬೆಟ್ಟ-ಗುಡ್ಡಗಳ ಸಾಲು.
    ಏರುತ್ತಾ ಹೋದಂತೆಲ್ಲಾ ಏರಿಸಿಕೊಳ್ಳುತ್ತಾ ಹೋಗುತ್ತವೆ ಈ ಬೆಟ್ಟಗಳು. ವಿದ್ಯುತ್ ತಂತಿಗಳು ಹಾಯ್ದುಹೋಗಿರುವ ಕಡೆ ನಡೆದರೆ ಕಿವಿಯೊಳಗೆ ಗುಯ್ ಗುಟ್ಟುವ ಸದ್ದು ಮಾರ್ದನಿಸುತ್ತದೆ. ಮೋಡಗಳು ಮುತ್ತಿಡುವಷ್ಟು ಹತ್ತಿರವಲ್ಲದಿದ್ದರೂ; ಕೈ ತಾಕುವಷ್ಟು ಸನಿಹ :)  ಈ ಬೆಟ್ಟದಿಂದ ಆ ಬೆಟ್ಟಕ್ಕೆ, ಅದರಿಂದ ಮತ್ತೊಂದಕ್ಕೆ ಕುಣಿದುಕೊಂಡು ಸಾಗಬಹುದು. ತುತ್ತತುದಿಯಲ್ಲಿ ದೊರಕುವ ನೀರವತೆ, ನಿರ್ಲಿಪ್ತತೆ ವಿವರಣೆಗೆ ನಿಲುಕದ್ದು. ಆ ಮೌನ ಅದಮ್ಯ ಹಾಗೂ ಅಗೋಚರ! ಈ ಬೆಟ್ಟಗಳಲ್ಲೆಲ್ಲೂ ಧೀಮಂತವೆನಿಸೋ ಮರಗಳಿಲ್ಲ. ತೇಗ, ಬೀಟೆ, ಸಾಗುವಾನಿ ಯಾವುದರ ಸುಳಿವೂ ಇಲ್ಲ! ಕುರುಚಲು ಪೊದೆ, ಕೈ-ಕಾಲಿಗೆ ಅಡರೋ ಮುಳ್ಳುಗಳ ಹೊರತು ಮತ್ತೇನೂ ಕಾಣ ಸಿಗದು. ಸರ್ವವ್ಯಾಪಿ ಶಂಕರನ ಪ್ರತಿರೂಪವಾದಂತೆ ಕಂಡವು ಈ ಬೆಟ್ಟಗಳು. ಬೆಟ್ಟವಾದರೇನು, ಬಯಲಾದರೇನು; ಪ್ರೀತಿ ಹಬ್ಬಿ ನಕ್ಕರಾಯಿತು ಎಂದು ಇಳಿದುಬಂದಿದ್ದೆ.
        ಈ ಸ್ಥಳದ ಸುತ್ತ ಹೆಚ್ಚೆಂದರೆ ನಾಲ್ಕೈದು ಮನೆಗಳಷ್ಟೇ ಇರುವುದು. ಸ್ಥಳೀಯರ ಪ್ರಕಾರ ಹೊಯ್ಸಳರ ರಾಜ ಈ ದೇವಸ್ಥಾನವನ್ನು ನಿರ್ಮಿಸಿದನಂತೆ.  1200 ವರ್ಷಗಳ ಇತಿಹಾಸವಿರೋ ದೇವರಮನೆ ಒಮ್ಮೊಮ್ಮೆ ವಿಸ್ಮಯವೆನಿಸಿದರೆ ಮತ್ತೊಮ್ಮೆ ನಿರ್ಲಿಪ್ತವೆನಿಸುತ್ತದೆ. ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ದಿನಕ್ಕೆ ಸರಿಸುಮಾರು 30 ರಿಂದ 35 ಜನರು 'ದೇವರಮನೆ'ಗೆ ಭೇಟಿ ನೀಡುತ್ತಾರೆ. ಹಲವಾರು ಧಾರಾವಾಹಿಗಳು ಮತ್ತು ಸಿನಿಮಾಗಳೂ ಇಲ್ಲಿ ಚಿತ್ರೀಕರಣಗೊಂಡಿವೆ. 'ಅದ್ಯಾವುದೋ ಸಿನಿಮಾದೋರು ಇಲ್ಲಿ ಜಾತ್ರೆ ಮಾಡಿದ್ರು ಸಾರ್.. ಅವ್ರು ಹಚ್ಚಿರೋ ಬಣ್ಣ ಎಲ್ಲಾ ಹಂಗೇ ಇದೆ ನೋಡಿ ಸಾರ್.. ಎಲ್ಲಾ ಕ್ಲೀನ್ ಮಾಡಿ ಅಂದ್ರೂ ಬಿಟ್ಟೋಗಿದಾರೆ ' ಎನ್ನುತ್ತಿದ್ದ ಸ್ಥಳೀಯನ ಮಾತಿನಲ್ಲಿ ನೋವಿನ ಛಾಯೆ ಎದ್ದು ಕಾಣುತ್ತಿತ್ತು. ಅದ್ಯಾಕೋ ಬೆಟ್ಟದ ಮೇಲೆ ಕಂಡ ಬೀರ್ ಬಾಟಲ್ ಗಳು , ಸಿಗರೇಟ್ ತುಂಡುಗಳು ಫಕ್ಕನೆ ನೆನಪಾದವು. ಕಾಲಭೈರವನೇ ಇವರಿಗೆಲ್ಲಾ ಬುದ್ಧಿ ದಯಪಾಲಿಸು ಎಂಬುದೊಂದು ಪ್ರಾರ್ಥನೆಯ ಸಲ್ಲಿಸಿ ಗೋಧೂಳಿ ಮುಹೂರ್ತದಲ್ಲಿ ಮರಳಿ ಹೊರಟ ನಮ್ಮನ್ನು ದಾರಿಯುದ್ದಕ್ಕೂ ಅಸ್ತಂಗತನಾಗುತ್ತಿದ್ದ ಸೂರ್ಯ ಕಾಡುತ್ತಿದ್ದ. 'ದೇವರಮನೆ' ಎಂಬ ಊರು ನನ್ನೊಳಗೆ ಇಳಿದು ಹೋದ ಕಥೆ ಮನದಲ್ಲಿ ರೂಪುಗೊಳ್ಳುತ್ತಿತ್ತು.. :)