ಶುಕ್ರವಾರ, ಆಗಸ್ಟ್ 28, 2015

ನೂಲಿನೆಳೆ ಶ್ರೀರಕ್ಷೆಯಾಗಲಿ..:)

'ಅಕ್ಕ ಬೇಕಿರಲಿಲ್ಲ ನಂಗೆ ಅಣ್ಣ ಬೇಕಿತ್ತು' ಅಂತ ಅಮ್ಮನಲ್ಲಿ ಮುಗಿಯದ ಮುನಿಸು ತೋರಿದ್ದಿದೆ.. ಕಿವಿಯೋಲೆಯಿಂದ ಕಾಲ್ಗೆಜ್ಜೆಯ ತನಕ ಎಲ್ಲವೂ ಅಕ್ಕನದ್ದೇ ಹಾಕುವಾಗ ಅಣ್ಣ ಇದ್ದಿದ್ರೆ ಹೊಸತೇ ಸಿಗ್ತಿತ್ತಲ್ವಾ ಎಂದು ಕನವರಿಸಿದ್ದಿದೆ! ಟ್ರಿಪ್, ಎಕ್ಸ್ ಕರ್ಷನ್ ಎಂದೆಲ್ಲಾ ತಿರುಗುವಾಗ ಬೆಳ್ಳಂಬೆಳಗ್ಗೆ ಡ್ರಾಪ್ ಮಾಡೋಕೆ, ರಾತ್ರೋರಾತ್ರಿ ಮನೆಗೆ ಕರೆದುಕೊಂಡು ಬರೋಕಾದ್ರೂ ಅಣ್ಣ ಇರಬೇಕಿತ್ತು ಅಂತ ಹಂಬಲಿಸಿದ್ದಿದೆ.. ಸುಖಾಸುಮ್ಮನೆ ತಂಗಿ ಎಂದು ಕರೆದ ಪಕ್ಕದ ಮನೆಯ ಹುಡುಗನನ್ನು ಅಣ್ಣ ಎಂಬಷ್ಟೇ ಹಚ್ಚಿಕೊಂಡು , ಅವನ ಮುದ್ದಿನ ತಂಗಿಯಾಗಿ, ದೊಡ್ಡ ದೊಡ್ಡ ಚಾಕಲೇಟ್ ಗಳ ಒಬ್ಬಳೇ ಒಡತಿಯಾಗಿ, ಅವನ ಮನೆ ಮಗಳೇ ಆಗಿ ಹೋಗಿದ್ದ ದೊಡ್ಡ ಖುಷಿಯ ಸಂಭ್ರಮದ ಭಾವ ಇನ್ನೂ ಮನದಲ್ಲಿದೆ! ಅದ್ಯಾಕೋ ಅವನ ಜೊತೆಗಿದ್ದ ಭಾವಗಳೆಲ್ಲಾ ಬಂಧನಗಳಾಗಿ ಬದಲಾಗಿ ಕಾರಣವನ್ನೂ ಹೇಳದೇ ಎದ್ದು ಬಂದಂದಿನಿಂದ ಅಣ್ಣನೆಂಬ ಕನಸು ಕನವರಿಕೆ ಕಮರಿಹೋಗಿದ್ದವು..
ವರ್ಷಗಳುರುಳಿ ಸಂಬಂಧಗಳನ್ನೆಲ್ಲಾ ಅಂತೆಯೇ ಬಿಟ್ಟು ಬಂಧನಗಳನಾಗಿಸದೇ ಬದುಕೋ ರೀತಿ ಕಲಿತ ಮೇಲೆ ಜೊತೆಗೂಡಿದವರಿವರು! ನನ್ನದಲ್ಲದ ಊರಲ್ಲಿ ಹೆಜ್ಜೆ ಹೆಜ್ಜೆಗೂ ಹೆದರಿ ಕಂಗಾಲಾಗುತ್ತಿದ್ದ ನಂಗೊಂದಿಷ್ಟು ಆತ್ಮಸ್ಥೈರ್ಯವ ತುಂಬಿ ಬೆಸೆದುಕೊಂಡ ಬಾಂಧವ್ಯಕ್ಕೆ 'ಅಣ್ಣ' ಅನ್ನೋ ಹೆಸರು ನೀಡಿ ಮೊಗದಲ್ಲಿ ನಗುವ ಮೂಡಿಸಿದವರು..
ನಮ್ಮೊಳಗೊಂದಷ್ಟು ಮುಗಿಯದ ತರಲೆಗಳಿವೆ, ತೀರದ ಮಾತುಗಳಿವೆ, ಅರ್ಥವೇ ಆಗದ ಭಾವಗಳಿವೆ, ಇರಿಸು-ಮುರಿಸುಗಳ ಮಹಾಪೂರವಿದೆ, ಶುದ್ಧ ಪ್ರೀತಿಯೊಂದಿಗೆ ಮನಸುಗಳ ಬೆಸೆದಿರೋ ಆತ್ಮೀಯತೆಯಿದೆ.. 'ಅಣ್ಣಾ ಎಂತ ಗೊತ್ತೇನೋ' ಅಂತಲೇ ಶುರುವಾಗೋ ಮಾತುಕಥೆಗಳು ಕಡೆಗೆ ನಿಮ್ಮ ಕಾಲೆಳುಯುವಿಕೆಗೆ ಕೆನ್ನೆಯುಬ್ಬಿಸಿ ಕುಳಿತಾಗ ಸಿಗೋ ಸಿಲ್ಕ್ ಈಗಲೂ ಅದರ ಮಧುರತೆಯನ್ನ ನೆನಪಿಸುತ್ತದೆ! ಕಾಲೇಜಿನ ತುಂಬೆಲ್ಲಾ 'ಅಣ್ಣಾ' ಅನ್ನಬೇಡ್ವೇ, ಎಲ್ಲರೂ ಅಣ್ಣ ಅಂತಾರೆ ಅಂತೇನೋ ಹುಸಿಮುನಿಸು ತೋರಿದ್ದಿದೆ.. ಇಳಿಸಂಜೆಯ ಕೆಂಪು ಕೆಂಪು ಬೆಳಕಲ್ಲಿ ಮುಗಿದುಹೋದ ಮೊದಲ ಪ್ರೀತಿಯನ್ನ ನನ್ನ ಮುಂದೆ ಹರವಿಟ್ಟು ಬಿಕ್ಕಿದ್ದಿದೆ! ಸಾಂತ್ವನಿಸಲು ತಿಳಿಯದೇ ನಾ ಕಂಗಾಲಾದಾಗ ಮುಗುಳ್ನಕ್ಕು ಐಸ್ ಕ್ರೀಮ್ ಕೊಡಿಸಿದ್ದಿದೆ.. ಹೆಚ್ಚೇ ಎನಿಸುವಷ್ಟು ಮಾತನಾಡಿ, ಹುಚ್ಚುಚ್ಚು ತರಲೆ ಮಾಡೋ ನನ್ನೊಮ್ಮೆ ಗದರಿ, ಮತ್ತೊಮ್ಮೆ ದೊಡ್ಡ ನಗು ನಕ್ಕು ಮುದ್ದಿಸೋದಿದೆ.. ಅರ್ಧರಾತ್ರಿಯ ಅವಾಂತರಗಳಿಗೆ ಹೆಗಲು ನೀಡಿ ಸಮಾಧಾನಿಸಿದ್ದಿದೆ! ಕತ್ತಲಲ್ಲೆಲ್ಲೋ ಮಧ್ಯರಸ್ತೆಯಲ್ಲಿ ನಿಂತು ದಾರಿ ತಿಳಿಯದಾದಾಗ ಮನೆ ತಲುಪಿಸಿ 'ಇನ್ಮುಂದೆಯಾದ್ರೂ ಹುಡುಗಿಯ  ತರ ಇರೋದನ್ನ ಕಲಿತುಕೋ' ಎಂದೊಮ್ಮೆ ಗುಡುಗಿ ಹೋದದ್ದಿದೆ.. ಕೆಲಸ ಸಿಕ್ಕ ತಕ್ಷಣ ನಂಗೊಂದು ಕರೆ ಮಾಡಿ ಖುಷಿಯ ಪಾಲು ನೀಡಿದ್ದಿದೆ! ಜೊತೆಗೇ ವಾಟ್ಸಪ್ ಅಲ್ಲೆಲ್ಲಾ ಹಾಕಿ ಜಾತ್ರೆ ಮಾಡ್ಬೇಡ ಅಂತ ಬೈದಿದ್ದಿದೆ.. :D  ಗಿರಿಯ ನೆತ್ತಿಯಲ್ಲಿ ನಿಂತು 'ತಂಗೀ, ಪ್ರೀತಿಸುತ್ತಿದ್ದೇನೆ ಕಣೇ ಅವಳನ್ನ.. ಬದುಕು ಬದಲಾಗುತ್ತಲ್ವಾ' ಎಂದು ಕೇಳಿದ್ದಿದೆ.. ಸೀರೆಯುಟ್ಟು ನಾ ಸಂಭ್ರಮಿಸುವಾಗ ಚಂದ ಕಾಣ್ತೀಯಾ ಆದ್ರೂ ಪುಟ್ತಂಗಿ ಅನಿಸೋಲ್ಲ ಎಂದೇನೋ ನೆಪ ಹೇಳಿ ಮತ್ತೆ ಉದ್ದಲಂಗಕ್ಕೆ ಜೋತುಬೀಳೋ ಹಾಗೆ ಮಾಡಿದ್ದಿದೆ.. ಕಡಲ ತೀರದಂತೆ ಕಾಣೋ ಹಿನ್ನೀರ ತಟದಲ್ಲಿ ನಿಂತು ಹೆಗಲು ತಬ್ಬಿ ' ನಿನ್ನಂಥಾ ಮಗಳು ಬೇಕು ಕಣೇ ಮುದ್ದಮ್ಮಾ' ಎಂದು ನನ್ನನ್ನೊಮ್ಮೆ ಭಾವುಕತೆಯಲ್ಲಿ ತೇಲಿಸಿದ್ದಿದೆ.. ಹಾವುಕವಲಿನ ರಸ್ತೆಗಳಲ್ಲಿ ಹೆಂಗೆಂಗೂ ಬೈಕ್ ಓಡಿಸಿ ಕಡೆಗೊಮ್ಮೆ 'ಗಾಬರಿಯಾಯ್ತೇನೇ ಪುಟ್ಟಿ' ಎಂದು ಕಣ್ಣುಮಿಟುಕಿಸಿದ್ದಿದೆ.. :ಫ್ ಹುಟ್ಟುಹಬ್ಬದ ದಿನ ದೊಡ್ಡದೊಂದು ಟೆಕ್ಸ್ಟ್ ಕಳಿಸಿ, ಚಂದದೊಂದು ಚಿತ್ರ ಬಿಡಿಸಿ , ನಂಗಿಷ್ಟವಾದದ್ದನ್ನೆಲ್ಲಾ ಕೊಡಿಸಿ ರಾಜಕುಮಾರಿಯ ಫೀಲ್ ಮೂಡಿಸಿದ್ದಿದೆ! :) 

ರಾಖಿ ಹಬ್ಬಕ್ಕೆ ದೂರದೂರಿಂದ ಬಂದು ಚಾಕಲೇಟ್ ಗಳ ಮೂಟೆ ಕೊಡಿಸಿ 'ಸಿಹಿಯಿರಲಿ ಕಣೇ ಬದುಕ ತುಂಬೆಲ್ಲಾ' ಎಂದು ಹರಸಿ ಹಾರೈಸಿದ್ದಿದೆ.. 'ಕನಸುಗಳೇಕೋ ಕೈ ತಾಕುತ್ತಿಲ್ಲವೋ ಅಣ್ಣಾ.. ಬೇಸರಿಸಿದೆ ಜಗ' ಎಂದರೆ ಕೈ ಹಿಡಿದೆತ್ತಿ ನಾ ಕಂಡ ಕನಸುಗಳನ್ನೆಲ್ಲಾ ದಕ್ಕಿಸಿಕೊಳ್ಳುವವರೆಗೆ ಜೊತೆ ನಿಂತಿದ್ದೆದೆ.. ತೀರಾ ಅವಲಂಬಿಸುತ್ತಿದ್ದೇನೆ ಅಂತನಿಸಿದಾಗೆಲ್ಲಾ ನನ್ನಿಂದ ದೂರ ನಿಂತು ನನ್ನ ನಾ ಸಂಭಾಳಿಸಿಕೊಳ್ಳಬಲ್ಲೆ ಎಂಬ ನಂಬಿಕೆ ಬಂದಾಗಲೇ ಬಳಿ ಬಂದದ್ದಿದೆ! ನೆನಪುಗಳ ರಾಶಿ ಹಾಕಿ ಕುಳಿತರೆ ಮನಸೆಲ್ಲಾ ಒದ್ದೆ ಒದ್ದೆ.. ಮಳೆಯಾದ ಮೇಲಿನ ಲಾಂಗ್ ಡ್ರೈವ್ ಗೆಲ್ಲಾ ನೆನಪಾಗ್ತೀಯಾ ಕಣೇ ಹುಡುಗೀ ಅಂತನ್ನೋ ಗೆಳೆಯನಿಗಿಂತ ಮಳೇಲಿ ಜಾಸ್ತಿ ನೆನಿಬೇಡ ಜ್ವರ ಬರತ್ತೆ ಅನ್ನೋ ಅಣ್ಣಂದಿರೇ ಹೆಚ್ಚು ಇಷ್ಟವಾಗ್ತಾರೆ ನಂಗೀಗ.. ' ನೈಲ್ ಪಾಲಿಶ್ ಕಲರ್ ಚಂದ ಇಲ್ಲ' ಎಂಬುದರಿಂದ ಹಿಡಿದು 'ಪ್ರೀತಿ ಪ್ರೇಮ ಎಲ್ಲಾ ನಿಂಗೆ ಸರಿ ಹೊಂದಲ್ವೇ.. ಇದ್ದುಬಿಡು ಬಾನ ತುಂಬಾ ಹಾರಾಡೋ ಹಕ್ಕಿಯಾಗಿ ' ಎಂಬಲ್ಲಿಯವರೆಗೆ ಬದುಕ ಪ್ರತಿ ನಿರ್ಧಾರದಲ್ಲೂ ಅವರದ್ದೊಂದು ಪ್ರೀತಿಯ ಅಪ್ಪಣೆಯಿದ್ದೇ ಇದೆ.. ಪಿ.ಜಿ ಯಲ್ಲಿನ ಗಲಾಟೆಗಳಿಗೆ ಅತ್ತು ಕಣ್ಣು ಕೆಂಪಾದಾಗೆಲ್ಲಾ ಗಂಟೆಗಟ್ಟಲೆ ಪಕ್ಕ ಕೂತು ಕಡೆಗೊಂದು ಗೋಲ್ ಗಪ್ಪ ಕೊಡಿಸಿ 'ಬದುಕಲ್ಲಿನ್ನೂ ಕಲಿಯಬೇಕಿದ್ದು ಹೆಚ್ಚಿದೆ ನಿಂಗೆ' ಅಂತೆಲ್ಲಾ ಉಪದೇಶ ಕೊಡೋದಿದೆ.. ಕಾಲೇಜ್ ಫಂಕ್ಷನ್ ಅಂತ ಊರೆಲ್ಲಾ ತಿರುಗೋವಾಗೋ ಹೆದರೋ ಅಪ್ಪ-ಅಮ್ಮಂಗೆ ಫೋನ್ ಮಾಡಿ 'ನಾ ನೋಡ್ಕೋತೀನಿ ಅಂಕಲ್ ಆರಾಮಾಗಿರಿ' ಅಂತೆಲ್ಲಾ ಧೈರ್ಯ ತುಂಬಿದ್ದಿದೆ.. ಈಗಲೂ ಅಮ್ಮನಿಗೆ ದೂರು ಹೇಳ ಹೋದರೆ ನಿನ್ನಣ್ಣಂದಿರಿದ್ದಾರಲ್ಲಾ ಸರಿ ಮಾಡೋಕೆ ಎಂತಂದು ನಗೋದಿದೆ! ;) 'ನಿನ್ನಪ್ಪ-ಅಮ್ಮಂಗೆ ಹೇಳಿರೇ.. ನಿನ್ನ ಮದುವೆಗೆ ನಾನೇ ಅರಳು ಹಾಕೋದು' ಅನ್ನೋ ಮಾತು ಕೇಳಿದಾಗೆಲ್ಲಾ ಕಣ್ಣಂಚಲ್ಲಿ ನೀರ ಸೆಲೆ..
'ತಂಗೀ.. ಈ ಸಲದ ರಾಖಿ ಹಬ್ಬಕ್ಕೆ ಎಂತ ಗಿಫ್ಟ್ ಬೇಕೇ' ಅನ್ನೊ ಮೆಸೇಜ್ ನೋಡಿ ನೆನಪಾದ ಭಾವಗಳನ್ನೆಲ್ಲಾ ಗುಡ್ಡೆ ಹಾಕುತ್ತಾ ಹೋದಾಗ ಹಿಂಗೊಂದು ಬರಹವಾಯಿತು! :*  ಮನದ ಜೊತೆಗೇ ಮನೆಯಲ್ಲೂ ನಂಗೊಂದು ಸ್ಥಾನ ನೀಡಿ ಅವರ ಮನೆಗಳಲ್ಲೂ ಮುದ್ದು ಮಗಳಾಗಿಸಿರೋ ಇವರ ಬಗ್ಗೆ ಬದುಕ ಪೂರ್ತಿ ಮುಗಿಯದ ಕೃತಜ್ಞತೆಯಿದೆ.. ಎಲ್ಲ ಅಣ್ಣಂದಿರಿಗೂ ಬ್ಲಾಗ್ ಲೋಕದಿಂದೊಂದು ಶುಭಾಶಯ ಹೇಳಿ ಹೋಗೋ ನೆಪದಲ್ಲಿ ಬಂದವಳು ನಾನಿಲ್ಲಿ! '' ಕಳೆದು ಹೋದ ಖುಷಿಗಳನ್ನು ಮಡಿಲಿಗೆ ತಂದು ಸುರಿದವರು ನೀವು.. ಒಡಹುಟ್ಟಿದವರಲ್ಲದಿದ್ದರೂ ಒಡನಾಡಿಗಳಾದವರು ನೀವು.. ನೂಲಿನೆಳೆ ಶ್ರೀರಕ್ಷೆಯಾಗಲಿ..:) ಬಾಂಧವ್ಯ ಭದ್ರವಾಗಲಿ.. ಪ್ರೀತಿ ಚಿರವಾಗಲಿ :*  ರಕ್ಷಾ ಬಂಧನದ ಶುಭಾಶಯಗಳು " 
ಇಂತಿ ಪ್ರೀತಿಯ 
ಲಹರಿ.. 


ಶನಿವಾರ, ಆಗಸ್ಟ್ 1, 2015

ಜುಲೈ 26!!

ಒಂದೈದು ವರ್ಷದ ಮಗು ನಾನಾಗ! ಅಪ್ಪನ ಕೆಲಸದ ನಿಮಿತ್ತ ಅದ್ಯಾವುದೋ ಕುಗ್ರಾಮದಲ್ಲಿ ವಾಸ.. ದೂರದರ್ಶನ, ಪತ್ರಿಕೆಗಳೆಲ್ಲಾ ನಮ್ಮನ್ನು ತಾಕುತ್ತಿದ್ದಿದ್ದು ಅಷ್ಟಕ್ಕಷ್ಟೇ! ಆಕಾಶವಾಣಿ ಮಾತ್ರ ಕೈಗೆಟುಕುತ್ತಿತ್ತು.. ಅಪ್ಪ ಹೇಳೋ ರಾಜ-ರಾಣಿಯರ ಕಥೆ ಕೇಳಿ ಮಲಗುತ್ತಿದ್ದ ದಿನಗಳವು.. ಆ ಕಥೆಗಳಲ್ಲಿ ಬರೋ ಸುಕೋಮಲೆಯರು , ಅವರ ಪ್ರೀತಿಯ ಸಾಲುಗಳು ಅಕ್ಕನಿಗೆ ಇಷ್ಟವಾಗ್ತಿದ್ರೆ ನಂಗೆ ಯುದ್ಧ-ಹೋರಾಟ ಅಂತೆಲ್ಲಾ ಬಂದಾಗ ಮಾತ್ರ ಕಥೆ ಇಂಟೆರೆಸ್ಟಿಂಗ್ ಅನ್ನಿಸ್ತಿತ್ತು.. ಅಭಿಮನ್ಯು ಅಂದ್ರೆ ಪಂಚಪ್ರಾಣ! ತನ್ನ ಸ್ಥಾನಕ್ಕಾಗಿ ತಪಸ್ಸು ಮಾಡೋ ಧೃವ, ಅರ್ಜುನನೊಂದಿಗೆ ಸಮಾಸಮ ಯುದ್ಧ ಮಾಡೋ ಕರ್ಣ.. ಎಷ್ಟೋ ದಿನ ಅಪ್ಪನಲ್ಲಿ ಹೇಳಿದ್ದೇ ಕಥೆ ಹೇಳಿಸಿ ಮಲಗಿದ್ದುಂಟು!
ಇನ್ನೂ ಮಳೆಗಾಲ ಶುರುವಾಗಿ ಹೆಚ್ಚು ದಿನಗಳಾಗಿರಲಿಲ್ಲ.. ಅಪ್ಪ ಯಾಕೋ ಆತಂಕದಲ್ಲಿದ್ದ ಹಾಗಿತ್ತು.. ಕಾರಣ ಕೇಳೋವಷ್ಟು ಧೈರ್ಯ ಇರಲಿಲ್ಲವಾದ್ದರಿಂದ ನಾನೂ ಸುಮ್ಮನಾಗಿದ್ದೆ. ಅವತ್ತು ಕಥೆ ಹೇಳೋಕೆ ಬಂದಿದ್ದ ಅಪ್ಪ ಕಣ್ಣಂಚಲ್ಲಿ ನೀರು ತುಂಬಿಕೊಂಡು ನಿಜವಾದ ಯುದ್ಧದ ಕಥೆ ಹೇಳ್ತೀನಿ ಅಂತಂದಿದ್ದರು! ನಂಗೋ ಹಿಡಿಸಲಾಗದ ಆಶ್ಚರ್ಯ.. ನಿಜಕ್ಕೂ ಯುದ್ಧ ಮಾಡ್ತಾರ ಅಂತ ಬೆರಗುಗಣ್ಣಿಂದ ಕೇಳಿದ್ದೆ.. ಆಮೇಲೆಲ್ಲಾ ಅಪ್ಪ ಆಕಾಶವಾಣಿಗೆ ಕಿವಿಗೊಟ್ಟು ಕೇಳೋದು ರಾತ್ರಿ ಅದೇ ಕಥೆಗಳನ್ನ ನಂಗೆ ಹೇಳೋದು ಇದೇ ನಡೆಯುತ್ತಿತ್ತು! ತೀರಾ ಸನ್ನಿವೇಶಗಳು, ಅಂಕಿಅಂಶಗಳು ನೆನಪಿಲ್ಲವಾದರೂ ಇಂದಿಗೂ ಆ ಹೆಸರುಗಳು , ಜಾಗಗಳು ಅಚ್ಚೊತ್ತಿದೆ ಮನದಲ್ಲಿ :) ಅಮ್ಮನ ಬಳಿ ಇಂಥದೇ ಕಥೆಗಳನ್ನ ನನ್ನ ಬಾಲ ಭಾಷೆಯಲ್ಲಿ ವಿವರಿಸೋವಾಗ ಅವಳ ಕಣ್ಣಾಲಿಗಳು ತುಂಬಿ ಬರುತ್ತಿದ್ದವು.. ದೇವರ ಮುಂದೊಂದು ದೀಪ ಹಚ್ಚಿ ಕುಕ್ಕರುಗಾಲಿನಲ್ಲಿ ಕೂತು   ಅವರನ್ನೆಲ್ಲಾ ಕಾಪಾಡಪ್ಪಾ ಭಗವಂತಾ ಎಂದು ಪ್ರಾರ್ಥಿಸಿಯೇ ಮುಂದಿನ ಕೆಲಸಕ್ಕೆ ತೊಡಗುತ್ತಿದ್ದುದು ಅಮ್ಮ! 
      ಬುದ್ಧಿ ಬೆಳೆದ ಮೇಲೇಯೇ ಕಾರ್ಗಿಲ್ ಯುದ್ಧದ ತೀವ್ರತೆಗಳು ಅರ್ಥವಾಗಿದ್ದು! ಬದುಕಲ್ಲೊಮ್ಮೆ ಅವರ ಕಂಡು ಕೈ ಮುಗಿಯಬೇಕೆಂಬ ಉತ್ಕಟತೆ ಆರಂಭವಾಗಿತ್ತು.. :) ಇಂದಿನವರೆಗೂ ಸಿಕ್ಕ ಯೋಧರಿಗೆಲ್ಲಾ ಕಣ್ಣ ಹನಿಯೊಂದಿಗಿನ ಸಮರ್ಪಣಾ ಭಾವದ ಧನ್ಯವಾದವನ್ನ ತಿಳಿಸಿದ್ದೇನೆ! ನಮ್ಮ ಕ್ಷೇಮಕ್ಕೆ ಸಕಲವನ್ನೂ ಧಾರೆಯೆರೆವ ಅವರೆಡೆಗೆ ಬದುಕ ಪೂರ್ತಿ ಮುಗಿಯದ ಆರಾಧನೆ ನನ್ನಲ್ಲಿ.. ಸೈನಿಕರ ಮರಣದ ಕಥೆ ಕೇಳುವಾಗೆಲ್ಲಾ ಅಪ್ಪನಲ್ಲಿ ಗೊಂದಲವ ಹರವಿಡುತ್ತಿದ್ದೆ! ಅವರ ಮಕ್ಕಳೆಲ್ಲಾ ಮುಂದೇನು ಮಾಡ್ತಾರೆ ಅಂತ.. ನಿನ್ನ ಹಾಗೇ ಅವರೆಲ್ಲಾ ಧೈರ್ಯವಂತರು ಅಪ್ಪನ ಬದುಕನ್ನೇ ಮಾದರಿಯನ್ನಾಗಿಟ್ಟುಕೊಂಡು ಬದುಕುತ್ತಾರೆ ಅಂತೇನೋ ಅಪ್ಪ ಹೇಳಿ ಸಮಾಧಾನಿಸಿದ್ದ ನೆನಪು.. ನಾನೂ ಯೋಧನ ಮಗಳಾಗಬಾರದಿತ್ತಾ ಎಂದೆನಿಸಿತ್ತು ಆಕ್ಷಣಕ್ಕೆ.. !! ತದನಂತರದ್ದೆಲ್ಲಾ ಮಾಮೂಲಿ ಹುಡುಗಿಯ ಬದುಕೇ ನಂದೂ.. ಅದೇ ಬಣ್ಣ ಬಣ್ಣದ ಬಟ್ಟೆಯ ಗುಂಗಲ್ಲಿ , ಪ್ರಪಂಚದ ಬೆರಗಲ್ಲಿ ಮುಳುಗಿ ಹೋದವಳೇ ನಾನು! ಕಿಶೋರಾವಸ್ಥೆ ದಾಟಿ ಹರೆಯಕ್ಕೆ ಬಂದಾಗಲೂ ಎಲ್ಲರಂತೆ ಸಿನಿಮಾ ಹೀರೋಗಳ ಗುಂಗಲ್ಲೇ ರಾತ್ರಿ ಪೂರ ನಿದ್ದೆ ಬಿಟ್ಟವಳು.. ಅದ್ಯಾವುದೋ ಪ್ರೇಮ ಚಿತ್ರಗೀತೆಯನ್ನ ಹಗಲೂ ಇರುಳೂ ಕೂತು ಕಂಠ ಪಾಠ ಮಾಡಿದವಳು! ಅಪರೂಪಕ್ಕೊಮ್ಮೆ ದೇಶಭಕ್ತಿ ಉಕ್ಕಿ ಹರಿಯುತ್ತಿದ್ದಾದರೂ ನಾ ಮಾಡಿದ್ದ ಕೆಲಸ ಯೋಧರಿಗೆ ಕೈ ಮುಗಿಯುವುದೊಂದೇ.. ಬಾಲ್ಯದ ಅಭ್ಯಾಸದಂತೆ ಅದೊಂದು ನನ್ನೊಳಗೇ ಬೆಳೆದುಬಂದಿತ್ತು!
                                         'ಅವ' ಸಿಗುವ ತನಕ ನನ್ನದೂ ತೀರಾ ಸಾಮಾನ್ಯ ಬದುಕಾಗಿತ್ತು.. ಬದುಕ ತಿರುವಿನಲ್ಲೆಲ್ಲೋ ಅವ ಕೈ ಹಿಡಿದಿದ್ದ! ಹಳೆಯ ಜನ್ಮದ ನೆನಪ್ಯಾವುದೋ ತಾಕಿ ಹೋದಂತಾಗಿತ್ತು ನನ್ನೊಳಗೆ.. ಅವನಿಗಿದ್ದ ಏಕೈಕ ಗುರಿ ಪರಮವೀರ ಚಕ್ರ! ನನ್ನೊಳಗೆ ಹುದುಗಿಹೋಗಿದ್ದ ಅದೆಷ್ಟೋ ಆಸೆ ಕನಸುಗಳನ್ನ ಅವ ಕೆದಕಿತೆಗೆದಿದ್ದ.. ಅವನ ಕಣ್ಣಲ್ಲಿ ನಕ್ಷತ್ರಗಳ ಮೇಲಿದ್ದ ವಾಂಛೆ ಜಗತ್ತಿನ ಅಷ್ಟೈಶ್ವೈರ್ಯಗಳನ್ನೂ ಕಾಲಕಸ ಮಾಡಿತ್ತು! ಪ್ರೀತಿಯಾಗಿತ್ತು ಅವನ ಮೇಲೆ.. ಒಲವಾಗಿತ್ತು ಅವನ ಕನಸ ಮೇಲೆ! ಪ್ರೀತಿಯ ಭಾವ ವಿನಿಮಯ ಮಾಡಿಕೊಂಡ ಮೇಲೂ ನಮ್ಮೊಳಗೆ ಯಾವುದೇ ರಸಿಕ ಸಂವಾದಗಳಿರಲಿಲ್ಲ.. ತುಂಟತನ, ದೈಹಿಕ ಬಯಕೆಗಳೆಲ್ಲವೂ ದೂರಾತಿದೂರ.. ಅವನ ಕನಸಿಗೆ ಹೆಜ್ಜೆ ಜೋಡಿಸೋ ಆತ್ಮಬಂಧು ನಾನಾಗಿದ್ದೆ! ಅಪ್ಪನ ರಾಜಕುಮಾರಿಯಾಗಿ ಮೆರೆದವಳು ಇವನ ಹೃದಯ ಸಿಂಹಾಸನ ಅಲಂಕರಿಸಹೊರಟಿದ್ದೆ.. 'ಸಿಂಹಾಸನದ ಪಕ್ಮದಲ್ಲೊಂದು ಜಾಗ ಮಾಡಿ ನಾ ನಿನ್ನ ಕೂರಿಸಿಯೇನು ಕಣೇ ಹುಡುಗೀ, ಆ ಸ್ಥಾನವನ್ನಾಗಲೇ ತಾಯಿ ಭಾರತಿಗೆ ಸಮರ್ಪಿಸಿಯಾಗಿದೆ' ಎಂದಿದ್ದ ಅವ.. ಪ್ರೀತಿ ಇಮ್ಮಡಿಯಾಗಿತ್ತು! ಅಲ್ಲಿಂದ ಮುಂದೆ ಹಿಂತಿರುಗಿ ನೋಡಿದ್ದಿಲ್ಲ ನಾವು.. ಪ್ರೀತಿಯ ಪ್ರತಿ ಘಳಿಗೆಯಲ್ಲೂ ದೇಶಪ್ರೇಮ ಸುರಿದಿದ್ದಿದೆ, ಕಂಡ ಕನಸುಗಳಲ್ಲೆಲ್ಲಾ ತಾಯಿ ಭಾರತಿಯ ಕನವರಿಕೆಗಳಿವೆ, ಹಾಕಿಕೊಂಡ ಆಣೆ ಪ್ರಮಾಣಗಳೆಲ್ಲಾ ಅವಳ ಹೆಸರಲ್ಲೇ! ಅವನ ಕನಸ ಹಾದಿಯಲ್ಲಿನ ಹೆಜ್ಜೆಯಲ್ಲಿ ಗೆಜ್ಜೆಯ ದನಿಯಾದ ಸಾರ್ಥಕತೆ ನನ್ನಲ್ಲಿ.. ಇನ್ನೂ ನೆನಪಿದೆ ಅವನ ಮೊದಲ ಎಸ್. ಎಸ್.ಬಿ ಮುಗಿದ ದಿನ ಆಕಾಶಕ್ಕೆ ಕೇಳುವಂತೆ ಖುಷಿಯಲ್ಲಿ ಕುಣಿದಿದ್ದೆ ನಾ.. 
                        ಮತ್ತದೇ ಮಳೆಗಾಲದ ಮೊದಲ ದಿನಗಳು ಈಗ.. ಅವನ ಟ್ರೈನಿಂಗ್ ಮುಗಿದು ಯೋಧಪಡೆ ಸೇರಲು ಇನ್ನೇನು ಕೆಲವೇ ದಿನಗಳು ಬಾಕಿಯಿವೆ..  ನಿನ್ನೆಯ ಬೆಳದಿಂಗಳಲ್ಲಿ ಅವನಿಗೆ ಕೇಳಿದ್ದೆ.. ಕೊನೆಯಾಸೆಯೇನೋ ಎಂದು! 'ತ್ರಿವರ್ಣ ಧ್ವಜದೊಳಗೆ ಸುತ್ತಿ ತರಬೇಕು ನನ್ನ' ಅಂದಾಕ್ಷಣ ಮೈ ರೋಮಗಳೆಲ್ಲಾ ನೆಟ್ಟಗಾಗಿತ್ತು ನಂಗೆ.. ಇವತ್ತು ಜುಲೈ 26!! ಬಾಲ್ಯದಲ್ಲೆಲ್ಲೋ ಅಪ್ಪ ಕಣ್ಣ ಹನಿಯೊಂದಿಗೆ ಸೈನ್ಯದ ಕಥೆ ಹೇಳಲು ಆರಂಭಿಸಿದ ದಿನ.. 'ಕಾರ್ಗಿಲ್ ವಿಜಯ ದಿವಸ್'!! ನನ್ನವನಿಗೊಂದು ದೊಡ್ಡ ಸೆಲ್ಯೂಟ್ ನೊಂದಿಗೆ ಬೀಳ್ಕೊಡುತ್ತಿದ್ದೇನೆ.. ಮರಳಿ ಬರುತ್ತಾನೆಂಬ ನಂಬಿಕೆಯ ಹೊರತಾಗಿ.. :)