ಒಂದೈದು ವರ್ಷದ ಮಗು ನಾನಾಗ! ಅಪ್ಪನ ಕೆಲಸದ ನಿಮಿತ್ತ ಅದ್ಯಾವುದೋ ಕುಗ್ರಾಮದಲ್ಲಿ ವಾಸ.. ದೂರದರ್ಶನ, ಪತ್ರಿಕೆಗಳೆಲ್ಲಾ ನಮ್ಮನ್ನು ತಾಕುತ್ತಿದ್ದಿದ್ದು ಅಷ್ಟಕ್ಕಷ್ಟೇ! ಆಕಾಶವಾಣಿ ಮಾತ್ರ ಕೈಗೆಟುಕುತ್ತಿತ್ತು.. ಅಪ್ಪ ಹೇಳೋ ರಾಜ-ರಾಣಿಯರ ಕಥೆ ಕೇಳಿ ಮಲಗುತ್ತಿದ್ದ ದಿನಗಳವು.. ಆ ಕಥೆಗಳಲ್ಲಿ ಬರೋ ಸುಕೋಮಲೆಯರು , ಅವರ ಪ್ರೀತಿಯ ಸಾಲುಗಳು ಅಕ್ಕನಿಗೆ ಇಷ್ಟವಾಗ್ತಿದ್ರೆ ನಂಗೆ ಯುದ್ಧ-ಹೋರಾಟ ಅಂತೆಲ್ಲಾ ಬಂದಾಗ ಮಾತ್ರ ಕಥೆ ಇಂಟೆರೆಸ್ಟಿಂಗ್ ಅನ್ನಿಸ್ತಿತ್ತು.. ಅಭಿಮನ್ಯು ಅಂದ್ರೆ ಪಂಚಪ್ರಾಣ! ತನ್ನ ಸ್ಥಾನಕ್ಕಾಗಿ ತಪಸ್ಸು ಮಾಡೋ ಧೃವ, ಅರ್ಜುನನೊಂದಿಗೆ ಸಮಾಸಮ ಯುದ್ಧ ಮಾಡೋ ಕರ್ಣ.. ಎಷ್ಟೋ ದಿನ ಅಪ್ಪನಲ್ಲಿ ಹೇಳಿದ್ದೇ ಕಥೆ ಹೇಳಿಸಿ ಮಲಗಿದ್ದುಂಟು!
ಇನ್ನೂ ಮಳೆಗಾಲ ಶುರುವಾಗಿ ಹೆಚ್ಚು ದಿನಗಳಾಗಿರಲಿಲ್ಲ.. ಅಪ್ಪ ಯಾಕೋ ಆತಂಕದಲ್ಲಿದ್ದ ಹಾಗಿತ್ತು.. ಕಾರಣ ಕೇಳೋವಷ್ಟು ಧೈರ್ಯ ಇರಲಿಲ್ಲವಾದ್ದರಿಂದ ನಾನೂ ಸುಮ್ಮನಾಗಿದ್ದೆ. ಅವತ್ತು ಕಥೆ ಹೇಳೋಕೆ ಬಂದಿದ್ದ ಅಪ್ಪ ಕಣ್ಣಂಚಲ್ಲಿ ನೀರು ತುಂಬಿಕೊಂಡು ನಿಜವಾದ ಯುದ್ಧದ ಕಥೆ ಹೇಳ್ತೀನಿ ಅಂತಂದಿದ್ದರು! ನಂಗೋ ಹಿಡಿಸಲಾಗದ ಆಶ್ಚರ್ಯ.. ನಿಜಕ್ಕೂ ಯುದ್ಧ ಮಾಡ್ತಾರ ಅಂತ ಬೆರಗುಗಣ್ಣಿಂದ ಕೇಳಿದ್ದೆ.. ಆಮೇಲೆಲ್ಲಾ ಅಪ್ಪ ಆಕಾಶವಾಣಿಗೆ ಕಿವಿಗೊಟ್ಟು ಕೇಳೋದು ರಾತ್ರಿ ಅದೇ ಕಥೆಗಳನ್ನ ನಂಗೆ ಹೇಳೋದು ಇದೇ ನಡೆಯುತ್ತಿತ್ತು! ತೀರಾ ಸನ್ನಿವೇಶಗಳು, ಅಂಕಿಅಂಶಗಳು ನೆನಪಿಲ್ಲವಾದರೂ ಇಂದಿಗೂ ಆ ಹೆಸರುಗಳು , ಜಾಗಗಳು ಅಚ್ಚೊತ್ತಿದೆ ಮನದಲ್ಲಿ :) ಅಮ್ಮನ ಬಳಿ ಇಂಥದೇ ಕಥೆಗಳನ್ನ ನನ್ನ ಬಾಲ ಭಾಷೆಯಲ್ಲಿ ವಿವರಿಸೋವಾಗ ಅವಳ ಕಣ್ಣಾಲಿಗಳು ತುಂಬಿ ಬರುತ್ತಿದ್ದವು.. ದೇವರ ಮುಂದೊಂದು ದೀಪ ಹಚ್ಚಿ ಕುಕ್ಕರುಗಾಲಿನಲ್ಲಿ ಕೂತು ಅವರನ್ನೆಲ್ಲಾ ಕಾಪಾಡಪ್ಪಾ ಭಗವಂತಾ ಎಂದು ಪ್ರಾರ್ಥಿಸಿಯೇ ಮುಂದಿನ ಕೆಲಸಕ್ಕೆ ತೊಡಗುತ್ತಿದ್ದುದು ಅಮ್ಮ!
ಬುದ್ಧಿ ಬೆಳೆದ ಮೇಲೇಯೇ ಕಾರ್ಗಿಲ್ ಯುದ್ಧದ ತೀವ್ರತೆಗಳು ಅರ್ಥವಾಗಿದ್ದು! ಬದುಕಲ್ಲೊಮ್ಮೆ ಅವರ ಕಂಡು ಕೈ ಮುಗಿಯಬೇಕೆಂಬ ಉತ್ಕಟತೆ ಆರಂಭವಾಗಿತ್ತು.. :) ಇಂದಿನವರೆಗೂ ಸಿಕ್ಕ ಯೋಧರಿಗೆಲ್ಲಾ ಕಣ್ಣ ಹನಿಯೊಂದಿಗಿನ ಸಮರ್ಪಣಾ ಭಾವದ ಧನ್ಯವಾದವನ್ನ ತಿಳಿಸಿದ್ದೇನೆ! ನಮ್ಮ ಕ್ಷೇಮಕ್ಕೆ ಸಕಲವನ್ನೂ ಧಾರೆಯೆರೆವ ಅವರೆಡೆಗೆ ಬದುಕ ಪೂರ್ತಿ ಮುಗಿಯದ ಆರಾಧನೆ ನನ್ನಲ್ಲಿ.. ಸೈನಿಕರ ಮರಣದ ಕಥೆ ಕೇಳುವಾಗೆಲ್ಲಾ ಅಪ್ಪನಲ್ಲಿ ಗೊಂದಲವ ಹರವಿಡುತ್ತಿದ್ದೆ! ಅವರ ಮಕ್ಕಳೆಲ್ಲಾ ಮುಂದೇನು ಮಾಡ್ತಾರೆ ಅಂತ.. ನಿನ್ನ ಹಾಗೇ ಅವರೆಲ್ಲಾ ಧೈರ್ಯವಂತರು ಅಪ್ಪನ ಬದುಕನ್ನೇ ಮಾದರಿಯನ್ನಾಗಿಟ್ಟುಕೊಂಡು ಬದುಕುತ್ತಾರೆ ಅಂತೇನೋ ಅಪ್ಪ ಹೇಳಿ ಸಮಾಧಾನಿಸಿದ್ದ ನೆನಪು.. ನಾನೂ ಯೋಧನ ಮಗಳಾಗಬಾರದಿತ್ತಾ ಎಂದೆನಿಸಿತ್ತು ಆಕ್ಷಣಕ್ಕೆ.. !! ತದನಂತರದ್ದೆಲ್ಲಾ ಮಾಮೂಲಿ ಹುಡುಗಿಯ ಬದುಕೇ ನಂದೂ.. ಅದೇ ಬಣ್ಣ ಬಣ್ಣದ ಬಟ್ಟೆಯ ಗುಂಗಲ್ಲಿ , ಪ್ರಪಂಚದ ಬೆರಗಲ್ಲಿ ಮುಳುಗಿ ಹೋದವಳೇ ನಾನು! ಕಿಶೋರಾವಸ್ಥೆ ದಾಟಿ ಹರೆಯಕ್ಕೆ ಬಂದಾಗಲೂ ಎಲ್ಲರಂತೆ ಸಿನಿಮಾ ಹೀರೋಗಳ ಗುಂಗಲ್ಲೇ ರಾತ್ರಿ ಪೂರ ನಿದ್ದೆ ಬಿಟ್ಟವಳು.. ಅದ್ಯಾವುದೋ ಪ್ರೇಮ ಚಿತ್ರಗೀತೆಯನ್ನ ಹಗಲೂ ಇರುಳೂ ಕೂತು ಕಂಠ ಪಾಠ ಮಾಡಿದವಳು! ಅಪರೂಪಕ್ಕೊಮ್ಮೆ ದೇಶಭಕ್ತಿ ಉಕ್ಕಿ ಹರಿಯುತ್ತಿದ್ದಾದರೂ ನಾ ಮಾಡಿದ್ದ ಕೆಲಸ ಯೋಧರಿಗೆ ಕೈ ಮುಗಿಯುವುದೊಂದೇ.. ಬಾಲ್ಯದ ಅಭ್ಯಾಸದಂತೆ ಅದೊಂದು ನನ್ನೊಳಗೇ ಬೆಳೆದುಬಂದಿತ್ತು!
'ಅವ' ಸಿಗುವ ತನಕ ನನ್ನದೂ ತೀರಾ ಸಾಮಾನ್ಯ ಬದುಕಾಗಿತ್ತು.. ಬದುಕ ತಿರುವಿನಲ್ಲೆಲ್ಲೋ ಅವ ಕೈ ಹಿಡಿದಿದ್ದ! ಹಳೆಯ ಜನ್ಮದ ನೆನಪ್ಯಾವುದೋ ತಾಕಿ ಹೋದಂತಾಗಿತ್ತು ನನ್ನೊಳಗೆ.. ಅವನಿಗಿದ್ದ ಏಕೈಕ ಗುರಿ ಪರಮವೀರ ಚಕ್ರ! ನನ್ನೊಳಗೆ ಹುದುಗಿಹೋಗಿದ್ದ ಅದೆಷ್ಟೋ ಆಸೆ ಕನಸುಗಳನ್ನ ಅವ ಕೆದಕಿತೆಗೆದಿದ್ದ.. ಅವನ ಕಣ್ಣಲ್ಲಿ ನಕ್ಷತ್ರಗಳ ಮೇಲಿದ್ದ ವಾಂಛೆ ಜಗತ್ತಿನ ಅಷ್ಟೈಶ್ವೈರ್ಯಗಳನ್ನೂ ಕಾಲಕಸ ಮಾಡಿತ್ತು! ಪ್ರೀತಿಯಾಗಿತ್ತು ಅವನ ಮೇಲೆ.. ಒಲವಾಗಿತ್ತು ಅವನ ಕನಸ ಮೇಲೆ! ಪ್ರೀತಿಯ ಭಾವ ವಿನಿಮಯ ಮಾಡಿಕೊಂಡ ಮೇಲೂ ನಮ್ಮೊಳಗೆ ಯಾವುದೇ ರಸಿಕ ಸಂವಾದಗಳಿರಲಿಲ್ಲ.. ತುಂಟತನ, ದೈಹಿಕ ಬಯಕೆಗಳೆಲ್ಲವೂ ದೂರಾತಿದೂರ.. ಅವನ ಕನಸಿಗೆ ಹೆಜ್ಜೆ ಜೋಡಿಸೋ ಆತ್ಮಬಂಧು ನಾನಾಗಿದ್ದೆ! ಅಪ್ಪನ ರಾಜಕುಮಾರಿಯಾಗಿ ಮೆರೆದವಳು ಇವನ ಹೃದಯ ಸಿಂಹಾಸನ ಅಲಂಕರಿಸಹೊರಟಿದ್ದೆ.. 'ಸಿಂಹಾಸನದ ಪಕ್ಮದಲ್ಲೊಂದು ಜಾಗ ಮಾಡಿ ನಾ ನಿನ್ನ ಕೂರಿಸಿಯೇನು ಕಣೇ ಹುಡುಗೀ, ಆ ಸ್ಥಾನವನ್ನಾಗಲೇ ತಾಯಿ ಭಾರತಿಗೆ ಸಮರ್ಪಿಸಿಯಾಗಿದೆ' ಎಂದಿದ್ದ ಅವ.. ಪ್ರೀತಿ ಇಮ್ಮಡಿಯಾಗಿತ್ತು! ಅಲ್ಲಿಂದ ಮುಂದೆ ಹಿಂತಿರುಗಿ ನೋಡಿದ್ದಿಲ್ಲ ನಾವು.. ಪ್ರೀತಿಯ ಪ್ರತಿ ಘಳಿಗೆಯಲ್ಲೂ ದೇಶಪ್ರೇಮ ಸುರಿದಿದ್ದಿದೆ, ಕಂಡ ಕನಸುಗಳಲ್ಲೆಲ್ಲಾ ತಾಯಿ ಭಾರತಿಯ ಕನವರಿಕೆಗಳಿವೆ, ಹಾಕಿಕೊಂಡ ಆಣೆ ಪ್ರಮಾಣಗಳೆಲ್ಲಾ ಅವಳ ಹೆಸರಲ್ಲೇ! ಅವನ ಕನಸ ಹಾದಿಯಲ್ಲಿನ ಹೆಜ್ಜೆಯಲ್ಲಿ ಗೆಜ್ಜೆಯ ದನಿಯಾದ ಸಾರ್ಥಕತೆ ನನ್ನಲ್ಲಿ.. ಇನ್ನೂ ನೆನಪಿದೆ ಅವನ ಮೊದಲ ಎಸ್. ಎಸ್.ಬಿ ಮುಗಿದ ದಿನ ಆಕಾಶಕ್ಕೆ ಕೇಳುವಂತೆ ಖುಷಿಯಲ್ಲಿ ಕುಣಿದಿದ್ದೆ ನಾ.. ಮತ್ತದೇ ಮಳೆಗಾಲದ ಮೊದಲ ದಿನಗಳು ಈಗ.. ಅವನ ಟ್ರೈನಿಂಗ್ ಮುಗಿದು ಯೋಧಪಡೆ ಸೇರಲು ಇನ್ನೇನು ಕೆಲವೇ ದಿನಗಳು ಬಾಕಿಯಿವೆ.. ನಿನ್ನೆಯ ಬೆಳದಿಂಗಳಲ್ಲಿ ಅವನಿಗೆ ಕೇಳಿದ್ದೆ.. ಕೊನೆಯಾಸೆಯೇನೋ ಎಂದು! 'ತ್ರಿವರ್ಣ ಧ್ವಜದೊಳಗೆ ಸುತ್ತಿ ತರಬೇಕು ನನ್ನ' ಅಂದಾಕ್ಷಣ ಮೈ ರೋಮಗಳೆಲ್ಲಾ ನೆಟ್ಟಗಾಗಿತ್ತು ನಂಗೆ.. ಇವತ್ತು ಜುಲೈ 26!! ಬಾಲ್ಯದಲ್ಲೆಲ್ಲೋ ಅಪ್ಪ ಕಣ್ಣ ಹನಿಯೊಂದಿಗೆ ಸೈನ್ಯದ ಕಥೆ ಹೇಳಲು ಆರಂಭಿಸಿದ ದಿನ.. 'ಕಾರ್ಗಿಲ್ ವಿಜಯ ದಿವಸ್'!! ನನ್ನವನಿಗೊಂದು ದೊಡ್ಡ ಸೆಲ್ಯೂಟ್ ನೊಂದಿಗೆ ಬೀಳ್ಕೊಡುತ್ತಿದ್ದೇನೆ.. ಮರಳಿ ಬರುತ್ತಾನೆಂಬ ನಂಬಿಕೆಯ ಹೊರತಾಗಿ.. :)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ