ಭಾನುವಾರ, ಜೂನ್ 14, 2015

ರುಕ್ಮಿಣಿಯಾಗದಿದ್ದರೂ ಭಾಮೆಯಾದರೂ ಆಗುತ್ತಿದ್ದೆನೇನೋ..

ಇಂಥದೇ ಒಂದು ಅರೆಬರೆ ಬೆಳಕಿರುವ ಸಂಜೆಯಲ್ಲಲ್ಲವಾ ನೀ ಸಿಕ್ಕಿದ್ದು ನಂಗೆ? ಇನ್ನೂ ಹೆಚ್ಚು ಕೆಂಪಗಿದ್ದ ಸೂರ್ಯ ಮುಳುಗುವ ಹೊತ್ತಲ್ಲೇ ನನ್ನ ಮನಸ್ಸಿನೊಳಗೆ ನಡೆದು ಬಂದಿದ್ದು ನೀನು.. ನಂತರದ್ದೆಲ್ಲಾ ಪ್ರೀತಿಯದ್ದೇ ಪ್ರವಾಹ! ನನ್ನ ಕನಸುಗಳ ಪ್ರಪಂಚದಲ್ಲಿ ನೀ ಕೃಷ್ಣನಾದರೆ , ನಿನ್ನ ನವಿಲುಗರಿಯ ಬದುಕಿನಲ್ಲಿ ರಾಧೆಯಾಗಿದ್ದೆ ನಾ! ರಾಧಾ-ಕೃಷ್ಣರು ಎಂದೂ ಸೇರುವುದಿಲ್ಲವೆಂಬ ಸತ್ಯ ತಿಳಿದಿದ್ದರೆ ಅಂದೇ ರುಕ್ಮಿಣಿಯಾಗುತ್ತಿದ್ದೆನೇನೋ… ಪ್ರೀತಿಸುವುದೊಂದೇ ಗೊತ್ತಿತ್ತು ಈ ಹೃದಯಕ್ಕೆ.
ಕಡುನೀಲಿ ಬಣ್ಣದ ಶರ್ಟ್ ತೊಟ್ಟು ಕೈಯಲ್ಲೊಂದು ಸಿಗರೇಟ್ ಹಿಡಿದವನ ನೋಡಿದಾಗ ನನ್ನೊಳಗೊಂದು ಹೂಕಂಪನ ಮೂಡಿತ್ತು.೧೯೯೬ರ ವ್ಯಾಲೆಂಟೈನ್ಸ್ ಡೇ ದಿನ ತುಂಗೆಯ ಕೊನೇ ಮೆಟ್ಟಿಲ ಮೇಲೆ ಕೂತು ನಿನ್ನ ಕಿರುಬೆರಳು ಹಿಡಿದ ಕ್ಷಣ ಆ ಹೂಕಂಪನಕ್ಕೊಂದು ಅರ್ಥ ಮೂಡಿತ್ತು. ಹೀಗೆ ಹದಿನೇಳರ ಹರೆಯದಲ್ಲಿ ಸದ್ದಾಗದೆ ಮೂಡಿದ್ದ ಪ್ರೀತಿಯೊಂದು ಮುಂದಿನ ಆರು ವರ್ಷಗಳ ಕಾಲ ಕನಸಾಗಿತ್ತು,ಕನವರಿಕೆಯಾಗಿತ್ತು,ಬದುಕಾಗಿತ್ತು! ನೀ ನೀನಾಗಿರುವುದಕ್ಕಿಂತ ಹೆಚ್ಚಾಗಿ ನಾನಾಗಿದ್ದೆ,ನಿನ್ನೊಳಗಿನ ನನ್ನನ್ನು ಹುಡುಕುವುದರಲ್ಲಿ ನಾ ಕಳೆದುಹೋಗಿದ್ದೆ.ನಿನ್ನ ಹಣೆಗೊಂದು ಕೊನೆಯ ಮುತ್ತು ನೀಡಿದ ಕ್ಷಣದಿಂದ ಹುಡುಕುತ್ತಿದ್ದೇನೆ , ಈ ಯೂರೋಪ್ ನಗರದಲ್ಲಿ, ಅಮೃತಶಿಲೆಯ ಮಹಲುಗಳಲ್ಲಿ ಎಲ್ಲಾದರೂ ನೀ ಕಾಣುತ್ತೀಯೇನೋ ಎಂದು! ನಿನ್ನೊಳಗಿದ್ದ ನಾ ಕಾಣುತ್ತೀನೇನೋ ಎಂದು…
ಭಾರತೀಬೀದಿಯ ಆ ಕೊನೆಯ ತಿರುವಿನಲ್ಲಿ ಇನ್ನೂ ನಿನ್ನ ಆತ್ಮದ ಚೂರೊಂದು ನನ್ನ ಗೆಜ್ಜೆಯ ದನಿಗಾಗಿ ಕಾಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ ಆಗಾಗ! ನೀ ನನಗೆಂದೇ ತರುತಿದ್ದ ಗಾಜರ್ ಕಾ ಹಲ್ವಾ, ಹುಡುಕಿ ಹುಡುಕಿ ನನಗಷ್ಟೇ ಕೇಳಿಸುತ್ತಿದ್ದ ಅದೊಂದಿಷ್ಟು ಹಾಡುಗಳು, ಮಳೆಗಾಲದಲ್ಲಿ ಮತ್ತೆ ಮತ್ತೆ ಬರುತ್ತಿದ್ದ ಆ ಬೆಚ್ಚಗಿನ ಜ್ವರ.. ’ನೆನಪೆಂದರೆ ಮಳೆಬಿಲ್ಲ ಛಾಯೆ!’ ಸಪ್ತಸಾಗರದಾಚೆಯಿಲ್ಲಿ ಸುಪ್ತ ಮನಸ್ಸೊಂದು ಮುದುಡಿದೆ. ನಿನ್ನಿಂದ ಗಾವುದ ಗಾವುದ ದೂರಕುಳಿತು ಪದಕ್ಕಿಳಿಸುತ್ತಿರುವ ನನ್ಯಾವ ಭಾವಗಳೂ ನಿನ್ನ ತಾಕುವುದಿಲ್ಲವೆಂಬ ಸತ್ಯದ ಅರಿವಿದ್ದೂ ಬರೆಯುತ್ತಿದ್ದೇನೆ! ಅಕ್ಷರಗಳ ಜೊತೆಗಿದ್ದಷ್ಟು ಹೊತ್ತೂ ನಿನ್ನ ಸಾಮೀಪ್ಯದ ಸುಖ ಈ ಮನಸ್ಸಿಗೆ..
      
ಈ ದೇಶದಲ್ಲಿ ಮೊದಲ ಮಳೆಯ ಮಣ್ಣಿನ ಘಮವಿಲ್ಲ, ರಾಧಾ-ಕೃಷ್ಣರ ವಿರಹದ ತಾಪವಿಲ್ಲ! ಸಂಬಂಧಗಳ ಹಪಾಹಪಿಯಿಲ್ಲ, ಬಯಕೆಗಳ ಕಾತರವಿಲ್ಲ, ಎಲ್ಲವೂ ಆಚ್ಛಾದಿತ ಹಿಮದಂತೆ ನಿರ್ಲಿಪ್ತತೆಯಲ್ಲಿ ಮಡುಗಟ್ಟಿದ ಮೌನ. ಹೀಗಿರುವಾಗಲೇ ನೀ ನೆನಪಾಗುತ್ತೀಯ! ಭಾರತೀ ಬೀದಿಯ ಹೆಜ್ಜೆ ಗುರುತುಗಳು, ಉಕ್ಕೇರುತ್ತಿದ್ದ ತುಂಗೆ, ಬೆಟ್ಟದ ದಾರಿಯ ಪಕ್ಕದಲ್ಲಿ ಅರಳುತ್ತಿದ್ದ ಸಂಪಿಗೆ, ಭೋರ್ಗರೆದು ಸುರಿವ ಮಳೆ, ಕಾರಿಡಾರಿನ ತುದಿಯಲ್ಲಿ ಇನ್ಫ಼ರಾಸೊನಿಕ್ ತರಂಗಗಳನ್ನೆಬ್ಬಿಸುತ್ತಿದ್ದ ಆ ಜೇಡ. ಹೀಗೆ ನೆನಪುಗಳ ಜಾತ್ರೆ ಸಾಗುತ್ತದೆ ಮನದ ಪರದೆಯ ಮೇಲೆ!
      
ಹನ್ನೆರಡು ಮಳೆಗಾಲಗಳ ಹಿಂದೆ ನಿನ್ನ ಜೊತೆ ಮಳೆಯ ಹನಿಗಳೊಡನೆ ಆಟವಾಡಿದ್ದು! ಅಲ್ಲಿಂದೀಚೆಗೆ ಮಳೆಯೆಂದರೆ ಕಿಟಕಿಯ ಮೇಲೆ ಬೀಳುವ ನೀರ ಗುಳ್ಳೆಗಳು. ಈ ದ್ವಾದಶ ವರ್ಷಗಳಲ್ಲಿ ಯಾವ ಶನಿವಾದ ಸಂಜೆಯಲ್ಲಿಯೂ ಆಮ್ಲೆಟ್ ತಿಂದಿಲ್ಲ! ಹುಚ್ಚು ಹಿಡಿಸುವ ಹುಡುಗನ ಸ್ಥಾನದಿಂದ ಶಾರುಖ್ ಕೆಳಗಿಳಿದಿದ್ದಾನೆ. ಗಾಜರ್ ಕಾ ಹಲ್ವ ಹಾಗೂ ಪೆಟ್ರೊಲಿನ ವಾಸನೆಯನ್ನು ಪ್ರಯತ್ನ ಪೂರಕವಾಗಿ ದೂರಮಾಡಿದ್ದೇನೆ. ಇವೆಲ್ಲದರ ನಡುವೆಯೂ ಆಗಾಗ ಬರುವ ಬೆಚ್ಚಗಿನ ಜ್ವರ ನಿನ್ನನ್ನು ಇಡಿ ಇಡಿಯಾಗಿ ಮನಃಪಟ್ಲದ ಮೇಲೆ ಮೂಡಿಸಿಬಿಡುತ್ತದೆ. ಹೂಕಂಪನ, ಹೆಣೆದ ಕನಸುಗಳು, ಖಾಲಿಯಾಗದ ವಿರಹ, ಮುಗಿದುಹೋದ ಪ್ರೀತಿ, ಕಂಬನಿ ತುಂಬಿದ ಬದುಕು! ತೀವ್ರಗೊಳ್ಳೂವ ಜ್ವರದೊಂದಿಗೆ ಮತ್ತೆ ಮತ್ತೆ ಆವರಿಸಿಕೊಳ್ಳುತಾ ಹೋಗುತ್ತದೆ ನಿನ್ನತನ ನನ್ನನ್ನು..
          
ರುಕ್ಮಿಣಿಯಾಗದಿದ್ದರೂ ಭಾಮೆಯಾದರೂ ಆಗುತ್ತಿದ್ದೆನೇನೋ! ಬದುಕು ರಾಧೆಯ ಪಾತ್ರಕ್ಕೇ ಅಂಟಿಕೊಂಡಂತಿತ್ತು. ಕಡೆಯ ಪಕ್ಷ ಮೀರಳಾಗಿದ್ದರಾದರೂ ನಿನ್ನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಬಹುದಿತ್ತೇನೋ! ಅವ್ಯಕ್ತತೆಯ ಭಾವವೇ ನೀನಾಗಿ ರೂಪುಗೊಂಡಿದೆ ಈಗ. ಕೃಷ್ಣನ ಹೆಸರೇ ತಿಳಿದಿಲ್ಲದ ಊರಿನಲ್ಲಿ ಅವನ ಕೊಳಲ ದನಿ ಹುಡುಕುವ ರಾಧೆಯಾಗಿದ್ದೇನೆ. ಎಂದಾದರೂ ಬದುಕು ಬದಲಾಗಬಹುದು, ರಾಗಗಳ ಸುಳಿಗಳಲ್ಲಿ ನಾ ಮತ್ತೆ ಕಳೆದು ಹೋಗಬಹದು, ಕವಿತೆಗಳ ಭಾವದಲ್ಲಿ ಕಳೆದು ಹೋದ ನಾನು ಮರಳಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ…                                                        
– ದೇವಯಾನಿ.!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ